ಸಿದ್ದಾಪುರ, ಜೂ. 11: ಮದುವೆ ಸಮಾರಂಭವೊಂದರಲ್ಲಿ ಕುಡಿದ ಮತ್ತಿನಲ್ಲಿ ಪರಸ್ಪರ ಕಲಹ ನಡೆದು ಓರ್ವ ತಡವಾಗಿ ಸಾವನ್ನಪ್ಪಿದ ಘಟನೆ ಸಿದ್ದಾಪುರ ಸಮೀಪದ ಮಾಲ್ದಾರೆಯ ದೊಡ್ಡಹಡ್ಲು ಹಾಡಿಯಲ್ಲಿ ನಡೆದಿದೆ. ತಾ. 8 ರಂದು ಮಾಲ್ದಾರೆಯ ಹಣ್ಣಿನ ತೋಟದ ನಿವಾಸಿಯೊಬ್ಬರ ವಿವಾಹ ಕಾರ್ಯವು ಸಿದ್ದಾಪುರದ ಮೈಸೂರು ರಸ್ತೆಯ ಕಲ್ಯಾಣ ಮಂಟಪದಲ್ಲಿ ಜರುಗಿತ್ತು. ವಿವಾಹ ಕಾರ್ಯಕ್ಕೆ ಶನಿವಾರದಂದು ರಾತ್ರಿ ಮಾಲ್ದಾರೆಯ ದೊಡ್ಡಹಡ್ಲು ನಿವಾಸಿಯಾಗಿರುವ ನಾಗ (65) ಬಂದಿದ್ದರು.
ಈ ಸಂದರ್ಭದಲ್ಲಿ ವಿವಾಹ ಕಾರ್ಯಕ್ಕೆ ಆಗಮಿಸಿದ್ದ ಸಿದ್ದಾಪುರ ಸಮೀಪದ ಅವರೆಗುಂದ ನಿವಾಸಿಯಾಗಿರುವ ಎಸ್.ಕೆ. ಶ್ರೀನಿವಾಸ್ (35) ನಡುವೆ ಕ್ಷುಲಕ ವಿಚಾರಕ್ಕೆ ಕಲಹ ನಡೆದಿದ್ದು, ಈ ಸಂದರ್ಭದಲ್ಲಿ ಶ್ರೀನಿವಾಸ್ ನಾಗನ ಮನೇಲೆ ಹಲ್ಲೆ ನಡೆಸಿ, ಕಾಲಿನಿಂದ ಹೊಟ್ಟೆಗೆ ತುಳಿದ ಪರಿಣಾಮ ನಾಗ ಗಾಯಗೊಂಡಿದ್ದ ಎನ್ನಲಾಗಿದೆ. ಗಾಯಾಳು ನಾಗನಿಗೆ ಪಿರಿಯಾಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಗಂಭೀರ ಸ್ಥಿತಿಯಲ್ಲಿದ್ದ ನಾಗನನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮಾರ್ಗ ಮಧ್ಯದಲ್ಲಿ ನಾಗ ಸಾವನ್ನಪ್ಪಿದ್ದಾರೆ. ಈ ಬಗ್ಗೆ ನಾಗನ ಪುತ್ರಿ ಜ್ಯೋತಿ ನೀಡಿದ ಪುಕಾರಿನ ಮೇರೆಗೆ ಆರೋಪಿ ಶ್ರೀನಿವಾಸನನ್ನು ಪೊಲೀಸರು ಬಂಧಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಹೇಶ್, ಮುಖ್ಯಪೇದೆ ಪಿ.ಟಿ. ಶ್ರೀನಿವಾಸ್, ಸಿಬ್ಬಂದಿ ಮಲ್ಲಪ್ಪ ಮುಗಶೀರ್ ಇತರರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಮಡಿಕೇರಿ ವಿಭಾಗದ ಡಿವೈಎಸ್ಪಿ ಸುಂದರ್ರಾಜ್ ಭೇಟಿ ನೀಡಿ ಸ್ಥಳ ಮಹಜರು ನಡೆಸಿದರು. ಆರೋಪಿ ಶ್ರೀನಿವಾಸ್ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸ ಲಾಯಿತು. -ವಾಸು