ಸಿದ್ದಾಪುರ, ಜೂ.11: ಗ್ರಾಮದಲ್ಲಿ ಹಲವು ಸಮಸ್ಯೆಗಳಿದ್ದು, ಬೇಡಿಕೆಗಳನ್ನು ಈಡೇರಿಸುವಂತೆ ಸಿ.ಪಿ.ಐ (ಎಂ) ನೆಲ್ಯಹುದಿಕೇರಿ ಗ್ರಾಮ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸಮಿತಿ ಕಾರ್ಯದರ್ಶಿ ಪಿ.ಆರ್ ಭರತ್, ನೆಲ್ಯಹುದಿಕೇರಿ ಭಾಗದಲ್ಲಿ ಮೂಲಭೂತ ಸೌಕರ್ಯಗಳು ಸೇರಿದಂತೆ ಮಳೆ ಹಾನಿ ಪರಿಹಾರ, ಕಾಡಾನೆ ಹಾವಳಿ ಮುಂತಾದ ಗಂಭೀರ ಸಮಸ್ಯೆಗಳಿದ್ದು, ಗ್ರಾಮಾಡಳಿತ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಕಳೆದ ವರ್ಷದ ಪ್ರವಾಹದಲ್ಲಿ ನೆಲ್ಯಹುದಿಕೇರಿಯ ಬೆಟ್ಟದಕಾಡು, ಬರಡಿ ವ್ಯಾಪ್ತಿಯ ಮನೆಗಳು ಜಲಾವೃತಗೊಂಡು ಹಾನಿಯಾಗಿದ್ದು, ಹಲವು ಮನೆಗಳು ಬಿರುಕು ಬಿಟ್ಟು ವಾಸಕ್ಕೆ ಯೋಗ್ಯವಾಗಿಲ್ಲ. ಇದೀಗ ಮತ್ತೊಂದು ಮಳೆಗಾಲ ಆರಂಭವಾಗುತ್ತಿದ್ದರೂ, ಈವರೆಗೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಗ್ರಾಮಾಡಳಿತ ವಿಫಲವಾಗಿದೆ ಎಂದು ದೂರಿದರು.

ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ನಲ್ವತ್ತೇಕ್ರೆ, ಬೆಟ್ಟದಕಾಡು ಸೇರಿದಂತೆ ವಿವಿಧ ಬಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಇತ್ತೀಚೆಗೆ ಕಾರ್ಮಿಕನೋರ್ವನ ಮೇಲೆ ಕಾಡಾನೆ ದಾಳಿ ನಡೆಸಿದೆ. ಕಾಡಾನೆಗಳು ಹಾಡಹಗಲೇ ರಸ್ತೆಗಳಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದ್ದು, ಕಾರ್ಮಿಕರು, ಬೆಳೆಗಾರರು ಹಾಗೂ ಸಾರ್ವಜನಿಕರು ಭಯದಿಂದಲೇ ಬದುಕಬೇಕಾಗಿದೆ ಎಂದರು.

ಗ್ರಾ.ಪಂ ವ್ಯಾಪ್ತಿಯ ರಸ್ತೆಗಳು ಹಳ್ಳಗಳಿಂದ ಕೂಡಿದೆ. ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯದ ಕೊರತೆ ಇದ್ದು, ಪ್ರಯಾಣಿಕರು ಪರದಾಡ ಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಗ್ರಾ.ಪಂ ಸ್ಪಂದಿಸಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಅವರು ಒತ್ತಾಯಿಸಿದರು. ಗೋಷ್ಠಿಯಲ್ಲಿ ಗ್ರಾಮ ಸಮಿತಿ ಸದಸ್ಯ ಜೋಸ್ ಮತ್ತು ರವಿ ಇದ್ದರು.