ವೀರಾಜಪೇಟೆ, ಜೂ. 12: ವೀರಾಜಪೇಟೆ ಪಟ್ಟಣ ಪಂಚಾಯಿತಿ 2016-17ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ ತಾಲೂಕು ಮೈದಾನ ಸಮೀಪ ಶೌಚಾಲಯ ನಿರ್ಮಾಣ ಮಾಡಲಾಗಿತ್ತು. ರೋಟರಿ ಶಾಲೆ, ತಾಲೂಕು ಕಚೇರಿ, ಗ್ರಂಥಾಲಯ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಶಾಖೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಹಾಗೂ ವಾಣಿಜ್ಯ ಬಳಕೆಯ ವಾಹನ ನಿಲ್ದಾಣ ಹೀಗೆ ಹಲವಾರು ಸಂಸ್ಥೆಗಳು ಪಕ್ಕದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂತೆ ದಿನವಾದರೆ ತಾಲೂಕಿನ ವಿವಿಧೆಡೆಗಳಿಂದ ಆಗಮಿಸುವ ಸಾರ್ವಜನಿಕರಿಗೆ ವಾಹನಗಳಲ್ಲಿ ಈ ಆವರಣದಲ್ಲಿ ಒಂದೇ ಒಂದು ಶೌಚಾಲಯವಿದೆ. ಆದರೆ ಎಂದಿಗೂ ಬೀಗ ಜಡಿಯಲ್ಪಟ್ಟಿರುತ್ತದೆ. ಬಳಕೆ ಮಾಡಲು ಸಾಧ್ಯವಿಲ್ಲದೆ ಪರಿತಪಿಸುತ್ತಿದ್ದಾರೆ. ಸರ್ಕಾರವು ನಿರ್ಮಾಣ ಮಾಡಿರುವ ಶೌಚಾಲಯ ಕಟ್ಟಡದ ಕೀಲಿಯು ಗೃಹ ರಕ್ಷಕ ಇಲಾಖೆಯ ಸುರ್ಪಧಿಯಲ್ಲಿದೆ. ಶೌಚಾಲಯದ ಬಳಕೆಯು ಇಲಾಖೆಯ ಬಳಕೆಗೆ ಮಾತ್ರ ಸೀಮಿತವಾಗಿರುವಂತಿದೆ. ನಾಗರಿಕರು ಸೇರಿದಂತೆ ಕ್ರೀಡಾಸಕ್ತರು ಬಯಲು ಶೌಚ ಮಾಡುವದರಿಂದ ಸಾಂಕ್ರಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿದೆ.
ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ದೂರು ನೀಡಿದರೂ ಪಂಚಾಯಿತಿಯು ಯಾವದೇ ಕ್ರಮ ಜರುಗಿಸಿಲ್ಲ. ಬೆಳಿಗ್ಗೆಯಿಂದ ಸಂಜೆಯವರಗೆ ಸರ್ಕಾರದ ವತಿಯಿಂದ ನಿರ್ಮಿಸಲಾದ ಈ ಶೌಚಲಾಯ ಸಾರ್ವಜನಿಕರ ಬಳಕೆಗೆ ಬರಬೇಕು ಎಂಬದು ನಾಗರಿಕರ ಆಗ್ರಹವಾಗಿದೆ.