ವೀರಾಜಪೇಟೆ, ಜೂ. 12: ಕಳೆದ ಸಾಲಿನಲ್ಲಿ ಬಿದ್ದ ಬಿರುಸು ಮಳೆಗೆ ಸಂತ್ರಸ್ತರ ಪರಿಹಾರ, ಸೌಲತ್ತುಗಳ ವಿತರಣೆಯಲ್ಲಿ ರಾಜಕೀಯದಾಟ ನಡೆದಿದೆ ಹಾಗಾಗಿ ಇಂದಿಗೂ ನೈಜವಾಗಿ ನೊಂದು, ಬೆಂದವರ ಕಣ್ಣಿರು ಒರೆಸಲು ಸಾಧ್ಯವಾಗಿಲ್ಲ ಎಂಬದು ತೀರಾ ವಿಷಾದನೀಯ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಚೋಟು ಅಪ್ಪಯ್ಯ ವಿಷಾದ ವ್ಯಕ್ತಪಡಿಸಿದರು.
ವೀರಾಜಪೇಟೆ ಸಮೀಪದ ಬೆಳ್ಳುಮಾಡು ಗ್ರಾಮದ ಬೆಳ್ಳುಮಾಡು ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಮಡಿಕೇರಿ ಮೇಘತಾಳು ಗ್ರಾಮದ 11 ಜನ ಪಲಾನುಭವಿಗಳಿಗೆ ಸಂಘದ ವತಿಯಿಂದ ನೀಡಲಾದ ಧನ ಸಹಾಯದ ಚೆಕ್ಕನ್ನು ವಿತರಿಸಿ ಮಾತನಾಡಿದರು.
ನಮಗೂ ಸಂತ್ರಸ್ತರ ನೋವಿನ ಅರಿವಿದೆ, ಕಳೆದ ಸಾಲಿನಲ್ಲಿ ಮಳೆಯಿಂದ ಅತಂತ್ರರಾಗಿ ಮೈತ್ರಿ ಹಾಲ್ನಲ್ಲಿ ತಂಗಿದ್ದ ಜನರಿಗೆ ನಮ್ಮ ಸಂಘದಿಂದ ಸಹಾಯಸ್ತ ಚಾಚಿದ್ದೆವು. ಆದರೆ ನೋವಿನ ವಿಚಾರ ಎಂದರೆ ನಾವು ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ನೀಡಿದ್ದ ವಸ್ತು ನೈಜ ಫಲಾನುಭಗಳಿಗೆ ತಲಪಿಲ್ಲ. ಕೆಲವರು ಜನರನ್ನು ವಂಚಿಸಿದರು ಎಂದು ವಿಷಾದಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಾತಂಡ ಪೂವಯ್ಯ ಮಾತನಾಡಿ, ಸಂಘವು ಸದಸ್ಯರ ಭತ್ಯೆ ಸೇರಿದಂತೆ ವಿವಿಧ ರೀತಿಯಲ್ಲಿ ಹಣ ಕ್ರೋಢೀಕರಣ ಮಾಡಿ ಇಂದು 11 ಜನ ಫಲನುಭವಿಗಳಿಗೆ ತಲಾ ಹತ್ತು ಸಾವಿರದಂತೆ ವಿತರಿಸಿ ಸಹಾಯ ಹಸ್ತ ನೀಡಿದ್ದೇವೆ ಎಂದರು. ಮೇಘತ್ತಾಳುವಿನ ಎಂ.ಎ. ಮಾಚಯ್ಯ, ಎಂ.ಎ. ಲವ, ಎಂ.ಪಿ. ಸೋಮಣ್ಣ, ಎಂ.ಡಿ. ಗಣಪತಿ, ಎಂ.ಎ. ಲಿಂಗರಾಜು, ಎಂ.ಎಸ್. ಮೋನನಿಷ್, ಎಂ.ಎ. ತಿಮ್ಮಯ್ಯ , ಎಂ.ಡಿ. ಪೂವಯ್ಯ, ಎಂ.ಎಂ. ತಮ್ಮಯ್ಯ, ಸಿ.ಸಿ. ಸೋಮಯ್ಯ ಮತ್ತು ಸಿ.ಸಿ. ಮುತ್ತಣ್ಣ ಪರಿಹಾರ ಪಡೆದ ಫಲಾನುಭವಿಗಳಾಗಿದ್ದಾರೆ. ಸಮಾರಂಭದಲ್ಲಿ ಸಂಘದ ನಿರ್ದೇಶಕರಾದ ಕಾಂಗೀರ ಅರ್ಜುನ, ದುಷ್ಯಂತ್ ರೈ, ಚೋಳಂಡ ಕಾವೇರಪ್ಪ, ಲಕ್ಷ್ಮೀ ದೇವಿ, ಕಾಮೆಯಂಡ ಅಚ್ಚಯ್ಯ, ಅಲ್ಲಪಿರ ದಾದ ಸೋಮಯ್ಯ, ಮದ್ದಂಡ ದಿನೇಶ್, ಚಿಣ್ಣಪ್ಪ, ಸಂಘದ ವ್ಯವಸ್ಥಾಪಕ, ಗಣೇಶ್, ಗುಮಾಸ್ತರಾದ ಡೈನ ಮತ್ತು ಕುಶಾಲಪ್ಪ ಹಾಗೂ ಗ್ರಾ.ಪಂ. ಸದಸ್ಯ ಕುಯ್ಮಂಡ ಕಾಳಯ್ಯ ಉಪಸ್ಥಿತರಿದ್ದರು.