ಮಡಿಕೇರಿ, ಜೂ. 11: ನಾವು ಈ ಜನ್ಮದಲ್ಲಿ ಜೀವನದ ಗುರಿ ಸಾಧನೆ ವಿಚಾರ ಬಂದಾಗ ಪ್ರಾಪಂಚಿಕವಾದ ಏಕಮಾತ್ರ ಚಿಂತನೆಯೊಂದಿಗೆ ವೈದ್ಯರಾಗಬೇಕು, ಇಂಜಿನಿಯರ್ ಆಗಬೇಕು, ಇನ್ನೇನೋ ಸಾಧಿಸಬೇಕು ಎನ್ನುವದೆ ಮುಖ್ಯ ಎನ್ನುವ ಹಾದಿಯಲ್ಲಿ ಸಾಗುತ್ತಿರುತ್ತೇವೆ. ಆದರೆ ಈ ಭುವಿಗೆ ಬರುವ ಮೊದಲು ನಾವು ಎಲ್ಲಿದ್ದೆವು; ನಮ್ಮ ಆಯಸ್ಸು ಮುಗಿದ ಬಳಿಕ ಎಲ್ಲಿಗೆ ತೆರಳುತ್ತೇವೆ ಎನ್ನುವ ಚಿಂತನೆಯನ್ನು ಬದುಕಿದ್ದಾಗಲೇ ಮಾಡಬೇಕು. ಆಗ ನಮಗೆ ನಮ್ಮೊಳಗೇ ನಮ್ಮನ್ನು ತಿಳಿದುಕೊಳ್ಳುವ ಆತ್ಮ ಸಾಕ್ಷಾತ್ಕಾರದ ಮಾರ್ಗ ನಿಜವಾದ ಗುರಿ ಎಂಬದು ಅರಿವಾಗುತ್ತದೆ ಎಂದು ಸದ್ಗುರು ಬಿ.ಕೆ. ಸುಬ್ಬಯ್ಯ ಅವರು ಜಾಗೃತಿಯ ನುಡಿಯಾಡಿದರು.

ಇಂದು ಇಲ್ಲಿನ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ತಲಕಾವೇರಿಯ ಸ್ವಾಮಿ ಆನಂದ ತೀರ್ಥರ ‘ಸಾಕ್ಷೀ ಚೈತನ್ಯ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪುಸ್ತಕದ ಕರ್ತೃ ಸ್ವಾಮಿ ಆನಂದ ತೀರ್ಥರು ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಎಂಬ ಚತುರ್ವಿಧÀ ಪುರುಷಾರ್ಥಗಳಿವೆ. ಬಾಕಿ ಎಲ್ಲವನ್ನೂ ಜೀವಿತ ಕಾಲದಲ್ಲಿ ಅನುಭವಿಸುವ ನಾವು ಮೋಕ್ಷದ ವಿಚಾರ ಬಂದಾಗ ಸಾವಿನ ಬಳಿಕ ಮೋಕ್ಷ ದೊರಕುತ್ತದೆ ಎನ್ನುವ ಭ್ರಮೆಯನ್ನು ಬಿಟ್ಟು ಜೀವಿತಾವಧಿ ಕಾಲದಲ್ಲಿಯೆ ನಮ್ಮೊಳಗಿರುವ ಆತ್ಮ ತತ್ವವನ್ನು ಅರಿತುಕೊಂಡು ಜೀವನ್ಮುಕ್ತಿ ಸಾಧಿಸಬೇಕೆಂದು ಕರೆಯಿತ್ತರು.

ಚಿಂತಕ ಲಕ್ಷ್ಮೀಶ ತೋಳ್ಪಡಿತ್ತಾಯ ಮಾತನಾಡಿ, ಪ್ರಪಂಚದಲ್ಲಿ ಭಗವಂತ ಮಾತ್ರ ಅಸಲಿಯಾಗಿದ್ದು, ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನುಕರಣೆಯ ಬದುಕು ಸಾಗಿಸುತ್ತಾನೆ. ಎಲ್ಲದರಲ್ಲೂ ಸಫಲತೆ ಬಯಸುವ ಮಾನವ; ಮೊದಲು ತನ್ನೊಳಗಿನ ವೈಫಲ್ಯಗಳನ್ನು ಸರಿಪಡಿಸಿ ಕೊಳ್ಳಬೇಕೆಂದರು.

ಶಕ್ತಿ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ ಅವರು ಸದ್ಗುರು ಬಿ.ಕೆ. ಸುಬ್ಬಯ್ಯ ಅವರ ಪರಿಚಯ ಮಾಡುತ್ತಾ, ಮಾತನಾಡಿ ಸುಬ್ಬಯ್ಯ ಅವರು ಎಂದಿಗೂ ಪ್ರಚಾರ ಬಯಸಿದವರಲ್ಲ. ಆದರೆ ಅವರ ಅದ್ಭುತವಾದ ಅಧ್ಯಾತ್ಮ ಮಾರ್ಗದರ್ಶನದಿಂದ ದೇಶ - ವಿದೇಶಗಳಲ್ಲಿ ಅವರ ನೂರಾರು ಮಂದಿ ಶಿಷ್ಯರು ನೈಜ ಅಧ್ಯಾತ್ಮದತ್ತ ಸಾಧನೆಯ ಮಾರ್ಗವನ್ನು ಅನುಸರಿಸುವಂತಾಗಿದೆ ಎಂದು ವಿವರಿಸಿದರು.

ಅತಿಥಿಯಾಗಿದ್ದ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ, ‘ಸಾಕ್ಷೀ ಚೈತನ್ಯ’ ಎಂದು ಸ್ವಾಮೀಜಿಯವರ ಪುಸ್ತಕದಲ್ಲಿ ಮಾನವನ ಪ್ರಾಪಂಚಿಕ ಆಗು ಹೋಗುಗಳನ್ನು ಆತನ ಆಂತರ್ಯದಲ್ಲಿರುವ ಆತ್ಮನು ಸಾಕ್ಷೀಭೂತನಾಗಿ ಸರ್ವತ್ರ ಗಮನಿಸುತ್ತಿರುವ ಕುರಿತು ಚಿಂತನೆಯಿದ್ದು, ಪುಸ್ತಕವು ಹೆಸರಿಗೆ ಪೂರಕವಾಗಿದೆ ಎಂದರು. ಭಾರತೀಯ ವಿದ್ಯಾಭವನ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಜೀವನದಲ್ಲಿ ಅಧ್ಯಾತ್ಮ ಗುರಿ ಸಾಧನೆ ಮುಖ್ಯ ಉದ್ದೇಶವಾಗಬೇಕೆಂದರು.

ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮಡಿಕೇರಿ ಅಧ್ಯಕ್ಷರಾದ ಸುಶೀಲ ಕುಶಾಲಪ್ಪ ವಹಿಸಿದ್ದರು. ಸಚಿನ್‍ಗೌಡ ನಿರೂಪಿಸಿ, ಗೀತಾ ಸಂಪತ್ ಕುಮಾರ್ ಪ್ರಾರ್ಥಿಸಿದರು. ಜಯಕುಮಾರ್ ಸ್ವಾಗತಿಸಿ, ಟಿ.ಎಸ್. ನಾರಾಯಣಾಚಾರ್ ವಂದಿಸಿದರು.