ಮಡಿಕೇರಿ, ಜೂ. 11: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ, ರಸ್ತೆಗಳ ಪರಿಸ್ಥಿತಿ ಹದಗೆಡುತ್ತದೆ ಅಲ್ಲದೆ, ಭಾರೀ ಭಾರ ತುಂಬಿದ ವಾಹನಗಳ ಸಂಚಾರದಿಂದ ರಸ್ತೆಗಳ ಬದಿಯಲ್ಲಿ ಮಣ್ಣು ಕುಸಿತ ಉಂಟಾಗಿ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲೆಯಾದ್ಯಂತ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.
ಎಲ್ಲಾ ರೀತಿಯ ಮರದ ದಿಮ್ಮಿ ಹಾಗೂ ಮರಳು ಸಾಗಾಣಿಕೆ ವಾಹನಗಳು, ವಾಹನದ ನೋಂದಣಿ ತೂಕ 16,200 ಕೆ.ಜಿ. ಗಿಂತ ಹೆಚ್ಚಿನ ಸರಕು ಸಾಗಾಟ ಮಾಡುವ ವಾಹನಗಳು, ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸೀಸ್ (ಮಲ್ಟಿ ಆಕ್ಸಿಲ್) ವಾಹನಗಳ ಸಂಚಾರವನ್ನು ಕೊಡಗಿನಾದ್ಯಂತ ನಿರ್ಬಂಧಿಸಲಾಗಿದೆ.
ಅಡುಗೆ ಅನಿಲ, ಇಂಧÀನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲಾ-ಕಾಲೇಜು ಮತ್ತು ಪ್ರಯಾಣಿಕ ವಾಹನಗಳು, ಮಲ್ಟಿ ಆಕ್ಸಿಲ್ ಬಸ್‍ಗಳ ಸಂಚಾರಕ್ಕೆ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದ್ದು, ಈ ಆದೇಶ ಆಗಸ್ಟ್ 8ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.