ವೀರಾಜಪೇಟೆ, ಜೂ. 12: ಗ್ರಾಮಾಂತರ ಶಾಲೆಗಳ ವಿದ್ಯಾರ್ಥಿಗಳಿಗೆ ಹಿಂದೂ ಜಾಗರಣ ವೇದಿಕೆಯಿಂದ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಲಾಯಿತು.
ವೀರಾಜಪೇಟೆ ಶಾಖೆಯ ವತಿಯಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಚ್ಚಿನಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯೇತರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತು. ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿ ಎಂ.ಬಿ. ಚಂದ್ರನ್ ಮಾತನಾಡಿ, ಗ್ರಾಮೀಣ ಶಾಲೆಯಲ್ಲಿ ಮಧ್ಯಮ ಮತ್ತು ಬಡವರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವದರಿಂದ ವಿದ್ಯಾರ್ಜನೆಗೆ ಬೇಕಾದ ಪಠ್ಯೇತರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕಿ ಪ್ರೀತಿ ಮಾತನಾಡಿ, ಸಾಮಗ್ರಿಗಳನ್ನು ಬಳಸಿಕೊಂಡು ವಿದ್ಯೆ ಕಲಿತು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದರು. ಶಾಲೆಯಲ್ಲಿ 142 ವಿದ್ಯಾರ್ಥಿಗಳಿಗೆ ಪಠ್ಯೇತರ ಸಾಮಗ್ರಿಗಳನ್ನು ವಿತರಿಸಲಾಯಿತು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯೆ ತನುಜಾ, ಶಾಲಾ ಆಭಿವೃದ್ಧಿ ಅಧ್ಯಕ್ಷ ಸುನೀತ, ಹಿಂದೂ ಜಾಗರಣ ವೇದಿಕೆಯ ನಗರ ಪ್ರಮುಖರಾದ ಪದ್ಮನಾಭ, ಸುರೇಶ್, ಮೇರಿಯಂಡ ಕರಣ್, ಮಹೇಂದ್ರ ಅನಂತ, ಸೀನಾ ಮತ್ತು ಶಾಲಾ ಶಿಕ್ಷಕಿಯರು ಹಾಜರಿದ್ದರು.