ಆಲೂರುಸಿದ್ದಾಪುರ, ಜೂ. 11: ಶನಿವಾರಸಂತೆ ಪಟ್ಟಣ ದಿನೇದಿನೇ ಅಭಿವೃದ್ಧಿಯಾಗುತ್ತಿರುವದರ ಜೊತೆಯಲ್ಲಿ ಜನಸಂಖ್ಯೆಯೂ ಅಷ್ಟೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕಳೆದ 10 ವರ್ಷಗಳಿಂದ ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆ ಕಾಡುತ್ತಿದ್ದು, ಪಟ್ಟಣದ ಕೆಆರ್‍ಸಿ ವೃತ್ತದ ಭಾಗದಲ್ಲಿರುವ ಕಸ ವಿಲೇವಾರಿಯನ್ನು ಪಕ್ಕದ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಸುಳುಗಳಲೆ ಕಾಲೋನಿಗೆ ಸೇರಿದ ಜಾಗದಲ್ಲಿ ತಳ್ಳುವ ಗಾಡಿಯಲ್ಲಿ ವಿಲೇವಾರಿ ಮಾಡಿದರೆ, 1ನೇ ವಿಭಾಗದಲ್ಲಿರುವ
(ಮೊದಲ ಪುಟದಿಂದ) ಕಸ ವಿಲೇವಾರಿಯನ್ನು ಸಮುದಾಯ ಆರೋಗ್ಯ ಕೇಂದ್ರದ ಸಮೀಪದ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿತ್ತು. ಆದರೆ ಸುಳುಗಳಲೆ ಕಾಲೋನಿಯಲ್ಲಿ ಮಾಡಲಾಗುತ್ತಿದ್ದ ಕಸ ವಿಲೇವಾರಿಯನ್ನು ಮಾಡದಂತೆ ದುಂಡಳ್ಳಿ ಗ್ರಾ.ಪಂ.ಯವರು ಆಕ್ಷೇಪ ಮಾಡಿದ ಹಿನ್ನೆಲೆಯಲ್ಲಿ ಈಗಲೂ ಪಟ್ಟಣದ ಎಲ್ಲಾ ವಿಭಾಗದಲ್ಲಿನ ಕಸವನ್ನು ಸಮುದಾಯ ಆರೋಗ್ಯ ಕೇಂದ್ರದ ಹಾಗೂ ಸರ್ಕಾರಿ ಉರ್ದು ಶಾಲೆ ಹಾಗೂ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತ್ತಿರುವ ಜಾಗದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ತೀರ ಇಕ್ಕಟ್ಟಾದ ಜಾಗದಲ್ಲಿ ಕಸ ವಿಲೇವಾರಿ ಮಾಡುತ್ತಿರುವದರಿಂದ ಈ ಕಸದ ರಾಶಿ ದಿನದಿಂದ ದಿನಕ್ಕೆ ಮುಖ್ಯ ರಸ್ತೆಗೆ ಸಮೀಪಿಸುತ್ತಿರುವದರಿಂದ ಸಾರ್ವಜನಿಕರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ, ಈ ಸಮಸ್ಯೆಯನ್ನು ಬಗೆಹರಿಸಲು ಕಳೆದ 2 ಅವಧಿಯಲ್ಲಿದ್ದ ಗ್ರಾ.ಪಂ. ಆಡಳಿತ ಮಂಡಳಿ ವಿಫಲಗೊಂಡಿದೆ.
ಕಸದ ರಾಶಿಗೆ ಶಾಲೆಯ ಮಕ್ಕಳು ಹಾಗೂ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ರೋಗಿಗಳು ಬರುವ ಸಂದರ್ಭದಲ್ಲೇ ಬೆಂಕಿ ಹಾಕುವದರಿಂದ ಅದರ ಹೊಗೆ ಶಾಲೆಯ ಕೊಠಡಿಯೊಳಗೆ ಹಾಗೂ ಆರೋಗ್ಯ ಕೇಂದ್ರದೊಳಗೆ ನುಸುಳುತ್ತಿದೆ ಇದರಿಂದ ಆರೋಗ್ಯದ ಮೇಲೆಯು ಸಹ ದುಷ್ಪರಿಣಾಮ ಬೀರಲಿದೆ. ಆದರೂ ಸಂಬಂಧಪಟ್ಟ ಶನಿವಾರಸಂತೆ ಗ್ರಾಮ ಪಂಚಾಯಿತಿ ನಿದ್ರೆಯಲ್ಲಿರುವದು ವಿಪರ್ಯಾಸ.
ಕಸ ವಿಲೆವಾರಿಗಾಗಿ ಜಾಗದ ಸಮಸ್ಯೆ
ಕಳೆದ 10 ವರ್ಷಗಳಿಂದಲೂ ಶನಿವಾರಸಂತೆ ಗ್ರಾ.ಪಂ.ತ್ಯಾಜ್ಯ ವಿಲೇವಾರಿಗಾಗಿ ಸ್ವಂತ ಜಾಗ ಇಲ್ಲದ ಕಾರಣದಿಂದ ಸಮಸ್ಯೆ ಎದುರಿಸುತ್ತಿದೆ. ಗ್ರಾ.ಪಂ.ಯವರು ವೈಜ್ಞಾನಿಕ ಕ್ರಮದಿಂದ ತ್ಯಾಜ್ಯ ವಿಲೇವಾರಿ ಮಾಡಲು ಮನಸು ಮಾಡುತ್ತಿಲ್ಲ. ಇತ್ತ ತ್ಯಾಜ್ಯ ವಿಲೇವಾರಿಗಾಗಿ ಸೂಕ್ತ ಜಾಗ ಇಲ್ಲದಿರುವದರಿಂದ ಇಕ್ಕಟ್ಟಾದ ಜಾಗದಲ್ಲೇ ವಿಲೇವಾರಿ ಮಾಡಲಾಗುತ್ತಿದೆ.
ಎರಡು ವರ್ಷದಿಂದ ನೆನೆಗುದಿಗೆ ಬಿದ್ದ ತ್ಯಾಜ್ಯ ವಿಲೇವಾರಿಗಾಗಿ ಗುರುತಿಸಿದ ಜಾಗದ ವಿವಾದ ಕಳೆದ ಎರಡು ವರ್ಷಗಳ ಹಿಂದೆ ಪಕ್ಕದ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ 2 ಎಕರೆ ಜಾಗದಲ್ಲಿ ತ್ಯಾಜ್ಯ ಶನಿವಾರಸಂತೆ ಕಂದಾಯ ಇಲಾಖೆ ಮೂಲಕ ಗುರುತಿಸಲಾಗಿತ್ತು. ಅದರಂತೆ ಗ್ರಾ.ಪಂ.ಆಡಳಿತ ಮಂಡಳಿ ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಜಾಗದಲ್ಲೇ ಕಸ ವಿಲೇವಾರಿ ಮಾಡುವದಾಗಿಯೂ ತೀರ್ಮಾನಿಸಿತ್ತು. ಆದರೆ ದುಂಡಳ್ಳಿ ಗ್ರಾ.ಪಂ.ಯ ಆಡಳಿತ ಮಂಡಳಿ ಶನಿವಾರಸಂತೆ ಗ್ರಾ.ಪಂ.ಯವರು ಗ್ರಾ.ಪಂ.ಗೆ ಸೇರಿದ ಜಾಗದಲ್ಲಿ ಕಸ ವಿಲೇವಾರಿ ಮಾಡದಂತೆ ಅಡ್ಡಿ ಮಾಡಿತ್ತು. ಈ ಕುರಿತು ಉಭಯ ಗ್ರಾ.ಪಂ.ಯವರು ಸೋಮವಾರಪೇಟೆ ತಹಶೀಲ್ದಾರರು ಮತ್ತು ಜಿಲ್ಲಾಧಿಕಾರಿ ಗಳಿಗೆ ಮನವಿಯನ್ನು ನೀಡಿದ್ದರು. ಈ ಪೈಕಿ ದುಂಡಳ್ಳಿ ಗ್ರಾ.ಪಂ.ಯವರು ನಮ್ಮ ಗ್ರಾ.ಪಂ.ಗೆ ಸೇರಿದ ಜಾಗವನ್ನು ಬೇರೆ ಗ್ರಾ.ಪಂ.ಗೆ ಕಸ ವಿಲೇವಾರಿಗಾಗಿ ಬಿಟ್ಟುಕೊಡಬಾರದು ಮತ್ತು ಈ 2 ಎಕರೆ ಜಾಗದಲ್ಲಿ ರುದ್ರಭೂಮಿಗೆ ಹಾಗೂ ನಮ್ಮ ಗ್ರಾ.ಪಂ.ಗೆ ಸೇರಿದ ಮನೆ ಇಲ್ಲದವರಿಗೆ ಮನೆ ಕಟ್ಟಿಕೊಳ್ಳಲು ಮೀಸಲಿಡುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರು. ಇತ್ತ ಶನಿವಾರಸಂತೆ ಗ್ರಾ.ಪಂ.ಯವರು ನಾವು ಗುರಿತಿಸಿದ ಜಾಗದಲ್ಲಿ ಕಸ ವಿಲೇವಾರಿ ಮಾಡಲು ಅವಕಾಶ ಮಾಡಿಕೊಡುವಂತೆಯೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ದುಂಡಳ್ಳಿ ಗ್ರಾ.ಪಂ.ಗೆ 2 ಎಕರೆ ಜಾಗವನ್ನು ಸುರ್ಪದಿಗೆ ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು.
ಉಭಯ ಗ್ರಾ.ಪಂ.ಗಳ ನಾನು ತಾನು ಎಂಬ ಪ್ರತಿಷ್ಠೆಗಾಗಿ ಕಸದ ಗೂಡಾಗುತ್ತಿರುವ ಪಟ್ಟಣ ದುಂಡಳ್ಳಿ ಗ್ರಾ.ಪಂ. ಮತ್ತು ಶನಿವಾರಸಂತೆ ಗ್ರಾ.ಪಂ. ಒಂದಕ್ಕೊಂದು ಅಂಟಿಕೊಂಡಂತ್ತಿರುವ ಗ್ರಾ.ಪಂ. ಗಳಾಗಿದ್ದು ದುಂಡಳ್ಳಿ ಗ್ರಾ.ಪಂ.ಯ ಜನರು ಪ್ರತಿ ದಿನ ಶನಿವಾರಸಂತೆ ಪಟ್ಟಣದ ಮೂಲಕವೇ ಹಾದು ಹೋಗಬೇಕಾಗಿದೆ. ಪ್ರತಿಯೊಂದು ವ್ಯವಹಾರವೂ ಪಟ್ಟಣದಲ್ಲೆ ಆಗಬೇಕಾಗಿದೆ.
ಉಭಯ ಗ್ರಾ.ಪಂ.ಗಳಿಗೂ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗುತ್ತಿದ್ದರೂ ತಮ್ಮ ತಮ್ಮ ಪ್ರತಿಷ್ಠೆಯಿಂದಾಗಿ ಉಭಯ ಗ್ರಾ.ಪಂ.ಯವರು ಸೇರಿಕೊಂಡು ಒಂದೆ ಕಡೆಯಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಿ ತ್ಯಾಜ್ಯ ವಿಲೇವಾರಿ ಮಾಡಬಹುದು. ಆದರೆ ಇದಕ್ಕೆ 2 ಗ್ರಾ.ಪಂ.ಯವರು ತೀರ್ಮಾನಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಜಟಿಲವಾಗುತ್ತಿದೆ.