ಕೂಡಿಗೆ, ಜೂ. 12: ಕೂಡಿಗೆ ಗ್ರಾ.ಪಂ. ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾರವರ ಅಧ್ಯಕ್ಷತೆಯಲ್ಲಿ ಕೂಡಿಗೆ ಗ್ರಾ.ಪಂ. ಆವರಣದಲ್ಲಿ ನಡೆಯಿತು.

ಕಳೆದ 4 ತಿಂಗಳುಗಳಿಂದ ಚುನಾವಣಾ ನೀತಿ ಸಂಹಿತೆಯಿದ್ದ ಹಿನ್ನೆಲೆಯಲ್ಲಿ ಸಭೆಗಳು ನಡೆಯದೇ ಗ್ರಾ.ಪಂ ವ್ಯಾಪ್ತಿಯ ವಾರ್ಡ್ ಗಳಲ್ಲಿ ಆಗಬೇಕಾದ ಪ್ರಮುಖ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಮಸ್ಯೆಗಳನ್ನು ಬೇಗನೇ ಬಗೆಹರಿಸುವ ಬಗ್ಗೆ ಸರ್ವ ಸದಸ್ಯರು ಚರ್ಚೆ ನಡೆಸಿದರು.

ಸಭೆಯಲ್ಲಿ ಕಳೆದ ಸಾಲಿನಲ್ಲಿ ಸರ್ಕಾರದಿಂದ ಬಿಡುಗಡೆಯಾದ ಗ್ರಾಮ ವಿಕಾಸ್ ಯೋಜನೆಯ ಒಂದು ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಈಗಾಗಲೇ ಕ್ರಿಯಾಯೋಜನೆಯಾಗಿದ್ದು, ಇದರ ಅನುಗುಣವಾಗಿ ಕಾಮಗಾರಿಯನ್ನು ಕೈಗೊಳ್ಳುವ ಬಗ್ಗೆ ಸರ್ವ ಸದಸ್ಯರು ತೀರ್ಮಾನಿಸಿದರು.

ಗ್ರಾ.ಪಂ. ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಸಭೆಯಲ್ಲಿ ಸದಸ್ಯರುಗಳ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದ್ದು, ಅದರನ್ವಯ ಕಾರ್ಯಗತಗೊಳಿಸಲು ಕಾರ್ಯೋನ್ಮುಖರಾಗುತ್ತೇವೆ. ಅಲ್ಲದೇ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಲು ಪಂಚಾಯಿತಿ ಕಾರ್ಯೋನ್ಮುಖವಾಗಲಿದೆ. ಪ್ರಮುಖವಾಗಿ ಶುಚಿತ್ವಕ್ಕೆ ಮತ್ತು ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು. ಈಗಾಗಲೇ ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರಿಗೆ ಮಂಜೂರಾಗಿರುವ ಮನೆಗಳನ್ನು ಆಯಾ ಫಲಾನುಭವಿಗಳಿಗೆ ಸಮರ್ಪಕವಾಗಿ ವಿತರಿಸಲಾಗುವದು ಎಂದರು.

ಈ ಸಂದರ್ಭ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪಾ, ಗ್ರಾ.ಪಂ. ಉಪಾಧ್ಯಕ್ಷ ಗಿರೀಶ್ ಕುಮಾರ್, ಸದಸ್ಯರಾದ ಕೆ.ವೈ. ರವಿ, ರಾಮಚಂದ್ರ, ಕೆ.ಜೆ. ಮೋಹಿನಿ, ರತ್ನಮ್ಮ, ಕಲ್ಪನ, ಕೃಷ್ಣ ಸೇರಿದಂತೆ ಇನ್ನಿತರ ಸದಸ್ಯರು ಇದ್ದರು.