ಮಡಿಕೇರಿ, ಜೂ. 11 : ಹಸಿ ಮತ್ತು ಒಣಕಸ ಬೇರ್ಪಡಿಸಿ ಗ್ರಾಮದ ಸ್ವಚ್ಛತೆಗೆ ಸಹಕರಿಸುವಂತೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಸ್ವಚ್ಛ ಭಾರತ ಅಭಿಯಾನ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ’ ಕಾರ್ಯಕ್ರಮದಲ್ಲಿ ‘ಭಿತ್ತಿಪತ್ರ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಒಣ ಕಸವಾದ ತ್ಯಾಜ್ಯ ಕಾಗದ, ಗಾಜಿನ ಬಾಟಲು, ಪ್ಲಾಸ್ಟಿಕ್ ಚೀಲ, ಟೆಟ್ರಾ ಪ್ಯಾಕ್, ಲೋಹದ ಕ್ಯಾನುಗಳು, ಹಾಗೆಯೇ ಹಸಿ ಕಸವಾದ ಮನೆಯ ತ್ಯಾಜ್ಯ, ತೆಂಗಿನ ಚಿಪ್ಪು, ಹೂಗಳು, ಒಡೆದ ಮೊಟ್ಟೆ ಚಿಪ್ಪು, ಎಲೆಗಳು ಮತ್ತಿತರವನ್ನು ವಿಂಗಡಿಸಿ ಕಸವನ್ನು ಎರೆ ಹುಳು ಗೊಬ್ಬರವನ್ನಾಗಿ ಮಾಡಬೇಕು ಎಂದರು.

ಉತ್ತಮ ಪರಿಸರ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಸ್ವಚ್ಛತೆ ಇದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳ ಬಹುದು. ಕಸ ಮತ್ತು ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಗಿಡಮರಗಳನ್ನು ಹೆಚ್ಚು ಬೆಳೆಸಬೇಕು ಎಂದು ಅವರು ಕರೆ ನೀಡಿದರು.

ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡರೆ ಇತರರ ಮನಸ್ಸನ್ನು ಸ್ವಚ್ಛತೆಯಿಂದ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು.

ಅಮೇರಿಕಾ, ಸಿಂಗಾಪುರ, ದುಬೈನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವಂತಿಲ್ಲ. ಅಷ್ಟರ ಮಟ್ಟಿಗೆ ಶುಚಿಯಾಗಿರುತ್ತದೆ. ಆದರೆ ಆ ದೇಶಗಳಿಂದ ಭಾರತಕ್ಕೆ ಇಳಿದ ತಕ್ಷಣ ಎಲ್ಲವೂ ಮಾಯವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ ಪ್ರತಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ಕಡ್ಡಾಯವಾಗಿ ಇರಬೇಕು ಮತ್ತು ಬಳಕೆ ಮಾಡಬೇಕು. ಛತ್ತೀಸ್Wಡ ರಾಜ್ಯದಲ್ಲಿ ಪ್ರತಿಯೊಂದು ಪುಟ್ಟ ಮನೆಯಲ್ಲಿಯೂ ಶೌಚಾಲಯ ಇರುವದನ್ನು ಕಾಣಬಹುದಾಗಿದೆ ಎಂದರು.

ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಪರಿಸರ ಶುಚಿಯಾಗಿ ಇಟ್ಟುಕೊಂಡಿರಬೇಕು. ನಾವು ತಿನ್ನುವ ಆಹಾರವನ್ನು ಬಿಸಾಡಬಾರದು. ಪರಿಸರ ಉಳಿಸಿ ಬೆಳೆಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಜಾಗೃತಿ ಸಂಬಂಧಿಸಿ ದಂತೆ ಸ್ಲೈಡ್ ಶೋ ಮೂಲಕ ಮಾಹಿತಿ ನೀಡುವಂತೆ ಲೋಕೇಶ್ವರಿ ಗೋಪಾಲ್ ಅವರು ಸಲಹೆ ಮಾಡಿದರು.

ಕಾರ್ಯಕ್ರಮ ಅನುಷ್ಠಾನ

ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಮಾತನಾಡಿ ಸ್ವಚ್ಛ ಮೇವ ಜಯತೇ ಆಂದೋಲನವು ಜಿಲ್ಲೆಯ 104 ಗ್ರಾಮ ಪಂಚಾಯಿತಿಗಳಲ್ಲಿ ಒಂದು ತಿಂಗಳ ಕಾಲ ಗ್ರಾಮಸ್ಥರ ಸಹಕಾರದಲ್ಲಿ ಜನ ಜಾಗೃತಿ ಹಾಗೂ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವದರ ಮೂಲಕ ನಡೆಯಲಿದೆ ಎಂದರು.

ಗ್ರಾಮೀಣ ಸಮುದಾಯಕ್ಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ನೀಡುವದು, ವೈಯಕ್ತಿಕ ಸಮುದಾಯ ಮತ್ತು ಸಾಂಸ್ಥಿಕ ಶೌಚಾಲಯಗಳ ನಿರ್ವಹಣೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ನೀಡುವದು, ಜಲಾಮೃತ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಶಾಲೆ, ಅಂಗನವಾಡಿ, ಸರ್ಕಾರಿ ಜಾಗದಲ್ಲಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ಗಿಡ ನೆÀಡುವ ಕಾರ್ಯಕ್ರಮ ಹಮ್ಮಿಕೊಳ್ಳುವದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.

ಈ ಕಾರ್ಯಕ್ರಮಗಳಿಗೆ ಪೂರಕವಾಗಿ ಒಂದು ತಿಂಗಳು ಪೂರ್ತಿಯಾಗಿ ಗ್ರಾಮ ಪಂಚಾಯಿತಿ ಗಳಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಜಾಗೃತಿ ನೀಡಲಾಗುತ್ತಿದೆ. ಜಿಲ್ಲೆಯ ಮೂರು ತಾಲೂಕಿನಲ್ಲಿ ಸ್ವಚ್ಛತಾ ರಥದ ಚಾಲನೆ ಮಾಡಿ ಜನ ಜಾಗೃತಿ ಮೂಡಿಸಲಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದರು.

‘ಜಲ ಸಂರಕ್ಷಣಾ ಹಾಗೂ ಪರಿಸರ ಸಂರಕ್ಷಣೆ ಅಂಗವಾಗಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 500 ರಿಂದ 1500 ಸಸಿಗಳನ್ನು ನೆಟ್ಟು ಪೋಷಿಸುವಂತೆ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಾಂದೋಲನ ಜನಜಾಗೃತಿ ಅಂಗವಾಗಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ, ಗ್ರಾ.ಪಂ.ಗಳು ಹಾಗೂ ಕಚೇರಿಗಳಲ್ಲಿ ಗೋಡೆ ಬರಹ ಬರೆಸಲಾಗುತ್ತದೆ ಎಂದರು.’

ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ವಿವಿಧ ಮಾದರಿಗಳನ್ನು ತಯಾರಿಸುವ ಸ್ಪರ್ಧೆಗಳನ್ನು ಶಾಲೆಗಳಲ್ಲಿ ಏರ್ಪಡಿಸಿ ಬಹುಮಾನ ನೀಡುವಂತೆ ಕ್ರಮತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಗಳಲ್ಲಿ ತ್ಯಾಜ್ಯ ನಿರ್ವಹಣೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 40 ಗ್ರಾಮ ಪಂಚಾಯಿತಿಗಳನ್ನು ತ್ಯಾಜ್ಯ ನಿರ್ವಹಣೆಗೆ ಆಯ್ಕೆಗೊಳಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಹಳೇ ಬಟ್ಟೆ, ಜೀನ್ಸ್ ಪ್ಯಾಂಟ್ ಮತ್ತಿತರ ಹಳೇ ಪದಾರ್ಥಗಳಿಂದ ಕೈ ಚೀಲ ತಯಾರು ಮಾಡುವದು. ಹೀಗೆ ಹಲವು ರೀತಿಯ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕುಶಾಲನಗರ ದಿಂದ ತಲಕಾವೇರಿವರೆಗೆ ಸ್ವಚ್ಛತೆ ಹಾಗೂ ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕಸದ ಬುಟ್ಟಿಗಳನ್ನು ಇಡಲಾಗುತ್ತದೆ ಎಂದರು.

ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಜಾಗೃತಿ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ಮತ್ತಿತರ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿವೆ ಎಂದು ಅವರು ತಿಳಿಸಿದರು.

ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ ಕುರಿತ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸಾಹಿತಿ, ರಂಗಕರ್ಮಿ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ನಿಧನ ಹಿನ್ನೆಲೆ ಸಂತಾಪ ಸೂಚಿಸಲಾಯಿತು. ಗ್ರೀನ್ ಸಿಟಿ ಫೊರಂ ಸ್ಥಾಪಕ ಅಧ್ಯಕ್ಷರಾದ ಚೆಯ್ಯಂಡ ಸತ್ಯ, ಮೋಂತಿ ಗಣೇಶ್, ಜಿ.ಪಂ. ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ ಅವರು ಸ್ವಾಗತಿಸಿದರು. ನಗರದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನೀ ಯರು ಪರಿಸರ ಗೀತೆ ಹಾಡಿದರು. ಮನೋಜ್ ನಿರೂಪಿಸಿದರು. ಗುಡೂರು ಭೀಮಸೇನ ವಂದಿಸಿದರು.

ಸ್ವಚ್ಛತಾ ರಥಕ್ಕೆ ಚಾಲನೆ: ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ ಕಾರ್ಯಕ್ರಮದ ಸ್ವಚ್ಛತಾ ರಥಕ್ಕೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಚಾಲನೆ ನೀಡಿದರು.

ಸ್ವಚ್ಛತಾ ರಥ ವಾಹನವು ಜುಲೈ, 10 ರವರೆಗೆ ಸಂಚರಿಸಲಿದೆ. ಜಿಲ್ಲೆಯ ಮೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತಾ ರಥದ ಮುಖಾಂತರ ಜಾಗೃತಿ ಮೂಡಿಸಲಾಗುತ್ತದೆ.

ಜಲಾಮೃತ ಪರಿಸರ ದಿನಾಚರಣೆ, ಪರಿಸರ ಸಂರಕ್ಷಣೆ ಜಾಗೃತಿ ಮತ್ತು ಸಸಿ ನೆಡುವ ಕಾರ್ಯಕ್ರಮ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ವಿಂಗಡಣೆ ಬಗ್ಗೆ ಜಾಗೃತಿ ಹಾಗೂ 41 ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣೆಯ ಅನುಷ್ಠಾನ ಗೊಳಿಸಲು ಚಾಲನೆ ಕಾರ್ಯಕ್ರಮ, ಶಾಲಾ ಮಕ್ಕಳಿಗೆ ಶುಚಿತ್ವ, ಕೈ ತೊಳೆಯುವ ಮಹತ್ವ, ಕಿಶೋರಿಯರಿಗೆ ಆರೋಗ್ಯ ಮಾಹಿತಿ ಹಾಗೂ ತ್ಯಾಜ್ಯದಿಂದ ವಿವಿಧ ಮಾದರಿಗಳನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರತಿ ಗ್ರಾ.ಪಂ. ಆವರಣದಲ್ಲಿ ಮತ್ತು ಪ್ರತಿ ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಗೋಡೆ ಬರಹ ಚಿತ್ರ ಬರೆಯುವದು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ, ಜಿ.ಪಂ. ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಸಹಾಯಕ ಕಾರ್ಯದರ್ಶಿ ಶ್ರೀಕಂಠ ಮೂರ್ತಿ, ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ಇತರರು ಇದ್ದರು.