ಸಿದ್ದಾಪುರ, ಜೂ. 10: ಗೊಂದಲ ಕೋಲಾಹಲ, ಕಿರುಚಾಟಗಳ ನಡುವೆ ಸಿದ್ದಾಪುರ ಗ್ರಾ.ಪಂ ಗ್ರಾಮಸಭೆಯು ಮುಕ್ತಾಯಗೊಂಡಿತು. ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಹಲವು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿಯ ನಡುವೆ ಮಾತಿನ ಚಕಮಕಿ ನಡೆಯಿತ್ತು. ಕರಡಿಗೋಡು ಗ್ರಾಮದ ನಿವಾಸಿ ಎಂ.ಎ ಕೃಷ್ಣ ಮಾತನಾಡಿ, ತಿಂಗಳಿಗೊಮ್ಮೆ ನಡೆಸಬೇಕಾದ ಗ್ರಾಮಸಭೆಯನ್ನು ಒಂದು ವರ್ಷ ಕಳೆದು ಇದೀಗ ತಡವಾಗಿ ನಡೆಸುತ್ತಿರುವದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದಾಪುರ ಎಂ.ಜಿ ರಸ್ತೆ ನಿವಾಸಿ ಸುಬ್ರಮಣಿ ಮಾತನಾಡಿ, ಪ್ರತಿ ಗ್ರಾಮಸಭೆಗಳಲ್ಲಿ ಧ್ವನಿವರ್ಧಕ ಬಳಸಲು ಜನರೇಟರ್ ಅಳವಡಿಸಲಾಗುತ್ತಿತ್ತು. ಆದರೇ ಈ ಗ್ರಾಮಸಭೆಗೆ ಯಾಕೆ ಜನರೇಟರ್ ಅಳವಡಿಸಿಲ್ಲ ಎಂದು ಪ್ರಶ್ನಿಸಿದರು. ಈ ಸಂದರ್ಭ ಸಭೆಯಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಬಳಿಕ ಜನರೇಟರ್ ಅಳವಡಿಸ ಲಾಯಿತು.
ಎಂ.ಜಿ ರಸ್ತೆಯ ನಿವಾಸಿ ನಾರಾಯಣ ಮಾತನಾಡಿ ಮಾರಿಕಟ್ಟೆ ಬಳಿ ಇದ್ದ ಸಾರ್ವಜನಿಕ ಶೌಚಾಲಯ ವನ್ನು ಗ್ರಾ.ಪಂ ಕೆಡವಿ ಹಾಕಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಶೌಚಾಲಯವಿಲ್ಲದೇ ಸಮಸ್ಯೆಯಾಗಿದೆ ಎಂದು ತಿಳಿಸಿದರು. ಇದಕ್ಕೆ ದ್ವನಿಗೂಡಿಸಿದ ಮಾರುಕಟ್ಟೆಯ ನಿವಾಸಿಗಳು ಗ್ರಾ.ಪಂ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಪೊಲೀಸರು ಮದ್ಯ ಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಗ್ರಾಮಸ್ಥ ಹೆಚ್.ಬಿ ರಮೇಶ್ ಮಾತನಾಡಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರುಗಳ ಕೊರತೆ ಇದ್ದು, ಕೂಡಲೇ ಹೆಚ್ಚುವರಿ ವೈದ್ಯರನ್ನು ನೇಮಕ ಮಾಡುವಂತೆ ವೈದ್ಯಾಧಿಕಾರಿ ಡಾ.ರೇವಣ್ಣ ಅವರನ್ನು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಡಾ.ರೇವಣ್ಣ, ವೈದ್ಯರ ಕೊರತೆ ಆಸ್ಪತ್ರೆಯಲ್ಲಿದ್ದು, ಈ ಬಗ್ಗೆ ಇಲಾಖೆಯ ಗಮನಕ್ಕೆ ತರುವದಾಗಿ ಅವರು ತಿಳಿಸಿದರು.
ಎಂ.ಗಿರೀಶ್ ಮಾತನಾಡಿ, ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಗಳನ್ನು ಅರಣ್ಯ ಇಲಾಖೆ ಹಾಗೂ ಆರ್.ಆರ್.ಟಿ ತಂಡ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಅಟ್ಟಿಸುತ್ತಿರುವದು ಸರಿಯಾದ ಕ್ರಮವಲ್ಲ. ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ದ್ವನಿಗೂಡಿಸಿದ ಸಾಮಾಜಿಕ ಕಾರ್ಯಕರ್ತ ಹೆಚ್.ಎಸ್ ಸಮದ್, ಅರಣ್ಯ ಇಲಾಖೆಯು ಕಾಡಾನೆಗಳಿಗೆ ಅರಣ್ಯದಲ್ಲಿ ಆಹಾರ ಹಾಗೂ ನೀರಿನ ಸೌಲಭ್ಯ ಒದಗಿಸಬೇಕೆಂದು ಸಲಹೆ ನೀಡಿದರು.
ವಿ.ಕೆ ಬಷೀರ್ ಮಾತನಾಡಿ, ಗುಹ್ಯ ಗ್ರಾಮದ ಕೂಡುಗದ್ದೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ವೋಲ್ಟೇಜ್ ಕೊರತೆಯಿಂದ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಈ ಬಗ್ಗೆ ಹಲವಾರು ಬಾರಿ ಚೆಸ್ಕಾಂಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಸರಿಪಡಿಸ ದಿದ್ದಲ್ಲಿ ಹೋರಾಟ ನಡೆಸಲಾಗುವದು ಎಂದರು.
ಗ್ರಾಮಸ್ಥ ಖಲೀಲ್ ಮಾತನಾಡಿ, ಗ್ರಾ.ಪಂ ಸೇರಿದ ಮಾರುಕಟ್ಟೆ ಭಾಗದಲ್ಲಿರುವ ಮಳಿಗೆಗಳಲ್ಲಿ ಕಸದ ರಾಶಿಯನ್ನು ಹಾಕಿ ವಿಲೇವಾರಿ ಮಾಡುತ್ತಿರುವದು ಸರಿಯಲ್ಲ. ಕಸ ವಿಲೇವಾರಿಗೆ ದುಂದು ವೆಚ್ಚವಾಗುತ್ತಿದೆ. ಇದರ ಬದಲಿಗೆ ಜಾಗ ಖರೀದಿಸಿ ಶಾಶ್ವತ ಯೋಜನೆ ರೂಪಿಸಲು ಸಲಹೆ ನೀಡಿದರು.
ವಿ.ಕೆ ಗಿರೀಶ್ ಮಾತನಾಡಿ, ಗುಹ್ಯ ಕೂಡುಗದ್ದೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ರಸ್ತೆಗಳು ಹದಗೆಟ್ಟಿದೆ. ಇದನ್ನು ದುರಸ್ತಿಪಡಿಸು ವಂತೆ ಹಲವಾರು ಬಾರಿ ಮನವಿ ಸಲ್ಲಸಿದರೂ ಗ್ರಾ.ಪಂ ಈವರೆಗೂ ದುರಸ್ತಿ ಮಾಡಿಲ್ಲ ಎಂದರು. ಕೆ.ಎಸ್. ಸುನಿಲ್ ಮಾತನಾಡಿ, ಸಿದ್ದಾಪುರದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದು, ಈ ಬಗ್ಗೆ ಗ್ರಾ.ಪಂ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಗ್ರಾಮಸ್ಥ ಬೈಜು ಮಾತನಾಡಿ, ಕರಡಿಗೋಡು ನದಿ ದಡದ ನಿವಾಸಿಗಳಿಗೆ ಸೂಕ್ತ ಸೂರು ಹಾಗೂ ನಿವೇಶನವನ್ನು ಒದಗಿಸಿಕೊಡ ಬೇಕೆಂದು ಒತ್ತಾಯಿಸಿದರು.
ಲಯನ್ಸ್ ಕ್ಲಬ್ ನ ಪದಾಧಿಕಾರಿಗಳಾದ ಕೀತಿಯಂಡ ವಿವೇಕ್ ಜೋಯಪ್ಪ ಹಾಗೂ ಬಡುವಂಡ ವೀಣಾ ಕುಂಞಪ್ಪ ಮಾತನಾಡಿ, ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಂಚಾಯಿತಿಯಲ್ಲಿ ಸಭೆ ನಡೆಸಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು. ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗ ಸಂತೋಷ್ ಮಾತನಾಡಿ, ಮುಂಗಾರು ಪ್ರಾರಂಭ ವಾಗಿದ್ದು, ಗ್ರಾಮಸ್ಥರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ತೊಂದರೆ ಎದುರಾದಲ್ಲಿ ಕೂಡಲೇ ಕಂದಾಯ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಅತಿದೊಡ್ಡ ಗ್ರಾ.ಪಂ ಹಾಗೂ ಅಧಿಕ ವರಮಾನ ಇರುವ ಗ್ರಾ.ಪಂ ಎಂಬ ಹೆಗ್ಗಳಿಕೆ ಇದ್ದರೂ, ಸಿದ್ದಾಪುರ ಗ್ರಾ.ಪಂ ಸಭಾಂಗಣದ ಹಂಚುಗಳು ಒಡೆದುಹೋಗಿದ್ದು, ಮೇಲ್ಚಾವಣಿಯ ಮರಗಳಿಗೆ ಮಣ್ಣು ಹಿಡಿದಿದೆ. ಕುಸಿದು ಬೀಳುವ ಹಂತದಲ್ಲಿರುವ ಸಭಾಂಗಣವನ್ನು ದುರಸ್ಥಿಪಡಿಸುವಂತೆ ಹಲವು ಗ್ರಾಮಸಭೆಗಳಲ್ಲಿ ಪ್ರಸ್ತಾಪಿಸಿಲಾಗಿತ್ತು. ಅಲ್ಲದೇ ಅಪಾಯದಂಚಿನಲ್ಲಿರುವ ಸಭಾಂಗಣದಲ್ಲಿ ಸಭೆ ನಡೆಸದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರೂ ಕೂಡ ಇಂದಿನ ಸಭೆಯನ್ನು ಸಭಾಂಗಣದಲ್ಲಿ ನಡೆಸಿರುವದು ಎಷ್ಟು ಸರಿ ಎಂದು ಗ್ರಾಮಸ್ಥ ರಮೇಶ್ ಪ್ರಶ್ನಿಸಿದರು. ಇದಕ್ಕೆ ಗ್ರಾಮಸ್ಥರು ಧÀ್ವನಿಗೂಡಿಸಿದರು.
ಪಿ.ಡಿ.ಓ ವಿಶ್ವನಾಥ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಕಸ ಹಾಕುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವದಾಗಿ ತಿಳಿಸಿದರು. ಕಸ ಹಾಕುವವರ ವಿರುದ್ಧ ಕಠಣ ಕ್ರಮ ಕೈಗೊಳ್ಳಲಾಗುವದು ಎಂದರು. ಸಭೆಯಲ್ಲಿ ನೋಡಲ್ ಅಧಿಕಾರಿ ಸಿದ್ದಾಪುರ ಪಶುವೈದ್ಯ ಅಧಿಕಾರಿ ಡಾ.ನವೀನ್, ತಾ.ಪಂ ಸದಸ್ಯ ಜನೀಶ್, ಗ್ರಾ.ಪಂ ಉಪಾಧ್ಯಕ್ಷರು, ಸದಸ್ಯರು ಇದ್ದರು. ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದ ಬಳಿಕ ಸಭೆ ನಡೆಯಿತು.