ಕುಶಾಲನಗರ, ಜೂ. 10: ಸೋಮವಾರಪೇಟೆ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ಸಂಚಾರಿ ನಿಯಮ ಮತ್ತು ಕಾನೂನು ಉಲ್ಲಂಘನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 3 ತಿಂಗಳ ಅವಧಿಯಲ್ಲಿ ರೂ. 23 ಲಕ್ಷ ದಂಡ ವಸೂಲಾತಿ ಮಾಡಿರುವದು ದಾಖಲೆಯಾಗಿದೆ.

ಚುನಾವಣಾ ಹಿನ್ನೆಲೆಯಲ್ಲಿ ಸೋಮವಾರಪೇಟೆ ಉಪ ವಿಭಾಗಕ್ಕೆ ನಿಯೋಜನೆಗೊಂಡ ಪೊಲೀಸ್ ಉಪ ಅಧೀಕ್ಷಕ ದಿನಕರ ಶೆಟ್ಟಿ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಮತ್ತು ಸಿಬ್ಬಂದಿಗಳ ತಂಡ ತಾಲೂಕಿನ ವಿವಿಧೆಡೆಗಳಲ್ಲಿ 2019 ರ ಮಾರ್ಚ್ ತಿಂಗಳಿನಿಂದ ಇದುವರೆಗೆ ಕಾರ್ಯಾಚರಣೆ ನಡೆಸಿ ಒಟ್ಟು 9579 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ರೂ. 16,55,700 ವಸೂಲಿ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲಿಸಿದ 328 ಪ್ರಕರಣಗಳಲ್ಲಿ ನ್ಯಾಯಾಲಯದ ಮೂಲಕ ರೂ. 6,44,150 ಮೊತ್ತ ವಸೂಲಿ ಮಾಡಲಾಗಿದೆ ಎಂದು ದಿನಕರ ಶೆಟ್ಟಿ ‘ಶಕಿ’್ತಗೆ ತಿಳಿಸಿದ್ದಾರೆ.

ಈ ಅವಧಿಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ ಅವರ ಮಾರ್ಗದರ್ಶನದಲ್ಲಿ ತಾಲೂಕಿನಾದ್ಯಂತ ಅಕ್ರಮ ಮರಳು ಸಾಗಾಟ 7 ಪ್ರಕರಣಗಳು, ಅಕ್ರಮ ಜೂಜಾಟ 8 ಪ್ರಕರಣ, ಅಕ್ರಮ ಸ್ಪೋಟಕ ಸಂಗ್ರಹ, ಅಕ್ರಮ ಮದ್ಯ ಮಾರಾಟ 11 ಪ್ರಕರಣ, ಅಕ್ರಮ ಗಾಂಜಾ ಮಾರಾಟ, ಗಾಂಜಾ ಗಿಡಗಳ 4 ಪ್ರಕರಣಗಳು, 2 ವೇಶ್ಯಾವಾಟಿಕೆ ದಂಧೆ ಪ್ರಕರಣ, 4 ಅಕ್ರಮ ಲಾಟರಿ ಮಾರಾಟ, ಅಕ್ರಮ ಬೀಟೆ ಮರ ಸಾಗಾಟ ಪ್ರಕರಣ, ತಂಬಾಕು ನಿಷೇಧಿತ ವಲಯದಲ್ಲಿ ಮಾರಾಟ ಮಾಡುತ್ತಿದ್ದ 17 ಪ್ರಕರಣಗಳು ಸೇರಿದಂತೆ ಕುಶಾಲನಗರ ವ್ಯಾಪ್ತಿಯ ಸಿದ್ದಲಿಂಗಪುರ, ಗುಡ್ಡೆಹೊಸೂರು, ಕೂಡಿಗೆ ವ್ಯಾಪ್ತಿಯಲ್ಲಿ ಮತ್ತು ಸೋಮವಾರಪೇಟೆ ಕುಂಬೂರು ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟ ಪತ್ತೆಹಚ್ಚಿ ಹಲವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ಕ್ಕೂ ಹೆಚ್ಚು ಬೈಕ್, ಮೊಬೈಲ್ ಸೇರಿದಂತೆ ಲಕ್ಷಾಂತರ ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮೂಲಕ ಜೂಜಾಟದ ವ್ಯಾಪ್ತಿಯ ಸ್ಥಳಗಳ ಕರಡು ಚಿತ್ರಣ ಮಾಡಿಕೊಳ್ಳುವ ಮೂಲಕ ಪೊಲೀಸ್ ಅಧಿಕಾರಿಗಳ ತಂಡ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ದಾಳಿ ಮಾಡಿದ್ದು ಇದೀಗ ತಾಲೂಕು ಬಹುತೇಕ ಅಪರಾಧ ಮುಕ್ತವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಕಿಸೆ ಕಳ್ಳತನ ಮಾಡುತ್ತಿದ್ದ ಅಂತರ್‍ರಾಜ್ಯ ಮಟ್ಟದ ಚೋರರ ತಂಡವೊಂದನ್ನು ಪತ್ತೆಹಚ್ಚಿ ಅವರಿಂದ ಕಳವು ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು ಇದೀಗ ಹಲವು ಸಮಯಗಳಿಂದ ನಿರಂತರವಾಗಿ ನಡೆಯುತ್ತಿದ್ದ ಪ್ರಕರಣಗಳಿಗೆ ಮುಕ್ತಿ ಹಾಡಲಾಗಿದೆ.

ಈ ನಡುವೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಅತಿ ಸೂಕ್ಷ್ಮ ಎರಡು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಸೋಮವಾರಪೇಟೆ ರೇಂಜರ್ ಬ್ಲಾಕ್‍ನ ಬನದ ದೇವತೆ ಮತ್ತು ಹನಫಿ ಮಸೀದಿ ಜಾಗದ ಬಹುದಿನಗಳ ಪ್ರಕರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗಿದೆ. ರಂಜಾನ್ ಹಬ್ಬದ ದಿನದಂದು ನಡೆದ ಗಲಭೆ ಸಂಬಂಧ ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಕೇವಲ 24 ಗಂಟೆಯ ಅವಧಿಯಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಇಡೀ ತಾಲೂಕಿನ ಪೊಲೀಸ್ ತಂಡ ಯಶಸ್ವಿಯಾಗಿದೆ. ಈ ನಡುವೆ ಸುಂಟಿಕೊಪ್ಪ ನಗರದ ಸಂತ ಅಂಥೋಣಿ ಚರ್ಚ್‍ನಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದ ಪ್ರಕರಣ ಹಿನ್ನೆಲೆಯಲ್ಲಿ ತಕ್ಷಣ ಅದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಪತ್ತೆಹಚ್ಚಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ ಎಂದು ದಿನಕರ ಶೆಟ್ಟಿ ತಿಳಿಸಿದ್ದಾರೆ.

ಕುಶಾಲನಗರ ಪಟ್ಟಣದಲ್ಲಿ ಬಹುದೊಡ್ಡ ಸಮಸ್ಯೆಯಾದ ಸಂಚಾರಿ ವ್ಯವಸ್ಥೆಗೆ ಕುಶಾಲನಗರ ರೋಟರಿ ಸಂಸ್ಥೆ ಸಹಕಾರದೊಂದಿಗೆ ಎರಡು ಪೊಲೀಸ್ ಬೂತ್ ಅಳವಡಿಕೆ ಮಾಡಲಾಗಿದೆ. ವೃತ್ತ ನಿರೀಕ್ಷಕ ದಿನೇಶ್‍ಕುಮಾರ್ ನೇತೃತ್ವದಲ್ಲಿ ಪಟ್ಟಣ ಪಂಚಾಯಿತಿಯಿಂದ ಸಂಪೂರ್ಣ ದಾಖಲೆ ಕಲೆಹಾಕುವದರೊಂದಿಗೆ ಸಂಚಾರಿ ವ್ಯವಸ್ಥೆ ತಜ್ಞರೊಂದಿಗೆ ಚರ್ಚಿಸಿ ಕುಶಾಲನಗರದಲ್ಲಿ ಏಕಮುಖ ರಸ್ತೆ ಸಂಚಾರ ಸೇರಿದಂತೆ ಸಂಚಾರ ವ್ಯವಸ್ಥೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ನೋಟಿಫಿಕೇಶನ್‍ಗೆ ಕ್ರಮಕೈಗೊಂಡಿರುವದಾಗಿ ತಿಳಿಸಿದರು.

ಕುಶಾಲನಗರ, ಸುಂಟಿಕೊಪ್ಪ, ಸೋಮವಾರಪೇಟೆ ವ್ಯಾಪ್ತಿಯ ಪಟ್ಟಣದಲ್ಲಿ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ ಮತ್ತು ಸಂಚಾರಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಪೊಲೀಸರಿಂದ ಬೈಕ್ ಜಾಥಾ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಪಘಾತ ಮುಕ್ತ ಸಂಚಾರಿ ವ್ಯವಸ್ಥೆಗೆ ಇಲಾಖೆ ದಿನನಿತ್ಯ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.

ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನಕರ ಶೆಟ್ಟಿ, ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಮತ್ತು ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿಶೇಷವಾಗಿ ಕುಶಾಲನಗರದ ಪೊಲೀಸ್ ಅಪರಾಧ ಪತ್ತೆದಳದ ತಂಡದ ಸದಸ್ಯರ ಮೂಲಕ ಬಹುತೇಕ ಪ್ರಕರಣಗಳು ಮತ್ತು ಆರೋಪಿಗಳ ಪತ್ತೆ ಕಾರ್ಯ ಯಶಸ್ವಿಯಾಗಿ ನಡೆದಿದ್ದು ಜನತೆ ಹಾಗೂ ಸಂಘಸಂಸ್ಥೆಗಳ ಸಹಾಯದೊಂದಿಗೆ ತಾಲೂಕನ್ನು ಬಹುತೇಕ ಅಪರಾಧ ಮುಕ್ತ ತಾಲೂಕು ಆಗಿ ಪರಿವರ್ತನೆ ಮಾಡಲು ಹೆಜ್ಜೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

-ವರದಿ : ಚಂದ್ರಮೋಹನ್