ವೀರಾಜಪೇಟೆ, ಜೂ. 10: ಮಧ್ಯಮ ಮತ್ತು ಗ್ರಾಮೀಣ ಭಾಗದಲ್ಲಿರುವ ಮಹಿಳೆಯರನ್ನು ಅರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಮಹಿಳೆಯರು ತಮ್ಮ ಶ್ರಮದಿಂದ ಮಾಡಿರುವ ಆಹಾರ ಉತ್ಪನ್ನಗಳು ಮತ್ತು ಸಿದ್ದಬಟ್ಟೆಗಳ ಪ್ರದರ್ಶನ ಮತ್ತು ಮಾರಾಟದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೀರಾಜಪೇಟೆ ನಗರದ ಸರ್ಕಾರಿ ನಿವೃತ್ತ ಉಪಾಧ್ಯಾಯರ ಸಂಘದ ಕಟ್ಟಡದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಘಟಕ ವೀರಾಜಪೇಟೆ ಶಾಖೆಯ ವತಿಯಿಂದ ಸಿರಿ ಹಬ್ಬ ಅಯೋಜಿತಗೊಂಡಿತ್ತು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೊಡಗು ಜಿಲ್ಲೆ ಯೋಜಾನಾಧಿಕಾರಿ ಯೋಗೇಶ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗಳ ಬಹುತೇಕ ಗ್ರಾಮೀಣ ಭಾಗದಲ್ಲಿರುವ ಮಹಿಳೆಯರು ಬೀಡಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ನಂತರದಲ್ಲಿ ಬೀಡಿ ಉದ್ಯಮ ಕೈಬಿಟ್ಟು ಮಧ್ಯಮ ಮತ್ತು ಗ್ರಾಮೀಣ ಭಾಗದ ಮಹಿಳೆಯರನ್ನು ಅರ್ಥಿಕವಾಗಿ ಸಬಲರನ್ನಾಗಿಸಲು ಸಂಸ್ಥೆಯ ವತಿಯಿಂದ ವಿವಿಧ ಸ್ವಯಂ ಉದ್ಯೋಗ ತರಬೇತಿ ನೀಡಲಾಗಿದ್ದು. ಇಂದು ಅಸಂಖ್ಯಾತ ಮಹಿಳೆಯರು ತಮ್ಮ ಶ್ರಮದಿಂದ ಸ್ವಾವಲಂಭಿ ಜೀವನವನ್ನು ಕಂಡುಕೊಂಡಿದ್ದಾರೆ. ಇಲ್ಲಿ ತಯಾರಾಗುವ ಸಿದ್ದ ಉಡುಪುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಎಂದು ಹೇಳಿದರು.
ನಿವೃತ್ತ ಉಪಾಧ್ಯಾಯರ ಸಂಘದ ಸದಸ್ಯರಾದ ಸೋಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಆಹಾರ ಪದಾರ್ಥಗಳಲ್ಲಿ ಕಲಬೆರಕೆಯ ಅಂಶಗಳು ಬೆರೆಸಿ ಸೇವನೆಯಾಗುತ್ತಿದ್ದು ಜನ ಸಾಮಾನ್ಯರು ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ ಆಹಾರ ಪದಾರ್ಥಗಳಲ್ಲಿ ಗುಣ ಮಟ್ಟವನ್ನು ಕಾಪಾಡಿಕೊಂಡು ಸಾರ್ವಜನಿಕರಿಗೆ ವಿತರಣೆಯಾಗ ಬೇಕು ಇದರಿಂದ ಸಂಸ್ಥೆಯ ಮೇಲೆ ವಿಶ್ವಾಸ ಬೆಳೆಯುತ್ತದೆ. ಮಾರುಕಟ್ಟೆ ಯಲ್ಲಿ ಉತ್ತಮ ಹೆಸರುಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯೋಜನಾಧಿ ಕಾರಿ ಸದಾಶಿವ, ಮ್ಯಾನೇಜರ್ ಸಂದೇಶ್. ವಲಯ ಮೇಲ್ವಿಚಾರಕಿ ದೇವಕ್ಕಿ ಮತ್ತು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನಾ ಘಟಕದ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು. -ಕೆ.ಕೆ.ಎಸ್