ಸಿದ್ದಾಪುರ, ಜೂ. 10 : ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತವಾದ ಶಿಕ್ಷಣವನ್ನು ನೀಡುವ ‘ಮಾರ್ನಿಂಗ್ ಗೋರಿ’ ಎಂಬ ಶಾಲೆಯನ್ನು ಆರಂಭಿಸಿ, ಕರಡಿಗೋಡುವಿನ ಇವಾಲ್ವ್ ಬ್ಯಾಕ್ ಸಂಸ್ಥೆ ಜಿಲ್ಲೆಗೆ ಮಾದರಿಯಾಗಿದೆ.

ಸಿದ್ದಾಪುರದ ಕರಡಿಗೋಡುವಿನಲ್ಲಿ ಬಹುತೇಕ ಬಡ ಕುಟುಂಬಗಳೇ ಇದ್ದು, ದಿನನಿತ್ಯ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳ ಹಿಂದೆ ಕರಡಿಗೋಡಿನಲ್ಲಿ ಸ್ಥಾಪನೆಗೊಂಡ ಇವಾಲ್ವ್ ಬ್ಯಾಕ್ (ಆರೆಂಜ್ ಕೌಂಟಿ) ಇದೀಗ ಗ್ರಾಮದ ಬಡ ಮಕ್ಕಳಿಗೆ ಆಂಗ್ಲ ಮಾದ್ಯಮದಲ್ಲಿ ಸಂಪೂರ್ಣ ಸೌಲಭ್ಯಗಳೊಂದಿಗೆ ಉಚಿತ ಶಿಕ್ಷಣ ನೀಡಲು ಮುಂದಾಗಿದೆ. ಕರಡಿಗೋಡುವಿನ ಸುಮಾರು 1 ಎಕರೆ ಜಾಗದಲ್ಲಿ ವಿಭಿನ್ನ ವಿನ್ಯಾಸದ ನೂತನ ಶಾಲೆ ಉದ್ಘಾಟನೆಗೊಂಡಿದ್ದು, ಈಗಾಗಲೇ ರೂ 1 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣವಾಗಿದೆ. ರಸ್ತೆ ಕಾಮಗಾರಿಗಳು ಸೇರಿದಂತೆ ಇನ್ನೂ ರೂ 25 ಲಕ್ಷ ವೆಚ್ಚದ ಕೆಲಸ ಬಾಕಿ ಇದ್ದು, ಶಾಲೆಯಿಂದಾಗಿ ಗ್ರಾಮದ ಬಡ ಕುಟುಂಬಗಳಿಗೆ ಉಪಯೋಗವಾಗಲಿದೆ.

ಶಾಲೆಯ ಸುತ್ತಲೂ ಮರಗಳು ಸೇರಿದಂತೆ ಹಚ್ಚಹಸಿರು ಪರಿಸರ ಇದ್ದು, ಕಲಿಕೆಗೆ ಪೂರಕವಾದ ವಾತಾವರಣ ಸೃಷ್ಠಿಸಲಾಗಿದೆ. ಮಾತ್ರವಲ್ಲದೇ ಶಾಲೆಯು ಅರಮನೆಗೆ ಹೋಲುವ ಮಾದರಿಯಲ್ಲಿದ್ದು, ಶಾಲೆಯು ಒಳಭಾಗದಲ್ಲಿ ನೈಸರ್ಗಿಕವಾದ ವಸ್ತುಗಳು, ಪೀಠೋಪಕರಣಗಳನ್ನು ಜೋಡಿಸಲಾಗಿದೆ. ಪುಟ್ಟ ಮಕ್ಕಳನ್ನು ರಂಜಿಸುವ ನಿಟ್ಟಿನಲ್ಲಿ ಹಲವು ವ್ಯವಸ್ಥೆ ಕಲ್ಪಿಸಲಾಗಿದೆ.

ಈಗಾಗಲೇ ಕರಡಿಗೋಡು ಗ್ರಾಮದ 40 ಮಂದಿ ವಿದ್ಯಾರ್ಥಿಗಳು ಶಾಲೆಗೆ ನೋಂದಾಣಿಗೊಂಡಿದ್ದು, ವಿದ್ಯಾರ್ಥಿಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ಇತರೆ ಪೌಷ್ಠಿಕ ಆಹಾರವನ್ನು ಶಾಲೆಯಲ್ಲಿಯೇ ಉಚಿತವಾಗಿ ನೀಡಲಾಗುತ್ತಿದೆ. ನುರಿತ ಶಿಕ್ಷಕರಿಂದ ಆಂಗ್ಲ ಮಾದ್ಯಮದಲ್ಲಿ ಉಚಿತವಾಗಿ ಶಿಕ್ಷಣ ನೀಡಲಿದ್ದು, ಪಠ್ಯಪುಸ್ತಕ ಸೇರಿದಂತೆ ಇತರೆ ಸೌಲಭ್ಯವನ್ನೂ ಸಂಸ್ಥೆಯೇ ಉಚಿತವಾಗಿ ವಿದ್ಯಾರ್ಥಿಗಳಿಗೆ ಒದಗಿಸಲಿದೆ.

ಶಾಲೆ ದತ್ತು: ಕಳೆದ ಹಲವು ವರ್ಷಗಳಿಂದ ಕರಡಿಗೋಡುವಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಇವಾಲ್ವ್ ಬ್ಯಾಕ್ ರೆಸಾರ್ಟ್ ಸಂಸ್ಥೆ ದತ್ತು ಪಡೆದುಕೊಂಡಿದ್ದು, ಉತ್ತಮ ಸೌಲಭ್ಯವನ್ನು ಒದಗಿಸುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಿಸಲಾಗುತ್ತಿದೆ. ಮಾತ್ರವಲ್ಲದೇ ಗಣಕಯಂತ್ರ ಹಾಗೂ ಇಂಗ್ಲೀಷ್ ಶಿಕ್ಷಕರನ್ನು ಸಂಸ್ಥೆಯ ವತಿಯಿಂದ ನೇಮಿಸಲಾಗಿದ್ದು, ಸಂಸ್ಥೆಯೇ ಶಿಕ್ಷಕರ ವೇತನವನ್ನು ನೀಡುತ್ತಿದೆ. ಸರಕಾರಿ ಶಾಲೆಯಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದ ಶಾಲೆಯನ್ನು ದತ್ತು ಪಡೆಯಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕಿ ಕಾಂತಿ ಅನೀಶ್ ತಿಳಿಸಿದ್ದಾರೆ.

ಪ್ರವಾಹದ ಸಂದರ್ಭದಲ್ಲೂ ಸಹಾಯ: ಕಳೆದ ವರ್ಷ ಸಂಭವಿಸಿದ ಪ್ರವಾಹದ ಸಂದರ್ಭದಲ್ಲಿ ಇವಾಲ್ವ್ ಬ್ಯಾಕ್ ಸಂಸ್ಥೆ ಪ್ರವಾಹಪೀಡಿತರಿಗೆ ಸಹಾಯಧನ ವಿತರಿಸಿ, ಜನಸಾಮಾನ್ಯರ ನೋವಿನಲ್ಲಿ ಬಾಗಿಯಾಗಿದೆ. ಕರಡಿಗೋಡು ನದಿ ದಡದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡ ನಿವಾಸಿಗಳಿಗೆ ರೂ ಹತ್ತು ಲಕ್ಷ ಸಹಾಯಧನವನ್ನು ವಿತರಿಸಲಾಗಿತ್ತು.

ಸಮಾಜಸೇವೆ: ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಇವಾಲ್ವ್ ಬ್ಯಾಕ್ ಸಂಸ್ಥೆಯ ವತಿಯಿಂದ ಸುಮಾರು 40 ಕ್ಕೂ ಅಧಿಕ ಸೋಲಾರ್ ದೀಪವನ್ನು ಉಚಿತವಾಗಿ ಅಳವಡಿಸಲಾಗಿದ್ದು, ಪಟ್ಟಣದಲ್ಲಿ ಸೋಲಾರ್ ಹೈಮಾಸ್ಟ್ ದೀಪವನ್ನು ಕೂಡ ಅಳವಡಿಸಲಾಗಿದೆ. ರೆಸಾರ್ಟ್‍ನಲ್ಲಿ ಶೇ 50 ರಷ್ಟು ಸಿಬ್ಬಂದಿ ಸ್ಥಳೀಯರೇ ಆಗಿದ್ದು, ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿಯ ಬದಲಾಗಿ ಗಾಜಿನ ಬಾಟಲಿ ನೀಡಲಾಗುತ್ತಿದೆ. ತ್ಯಾಜ್ಯ ನಿರ್ವಹಣೆಯಲ್ಲಿ ಕೆಲ ವರ್ಷದ ಹಿಂದೆ ಏಷ್ಯ ಮಟ್ಟದ ಪ್ರಶಸ್ತಿ ಲಭಿಸಿತ್ತು. -ಚಿತ್ರ ವರದಿ: ಎ.ಎನ್. ವಾಸು