ಮಡಿಕೇರಿ, ಜೂ. 10: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯ ಹಿನ್ನಡೆಯಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಲಾರದೆ ಸಂಕಷ್ಟದೊಂದಿಗೆ ಕಂಗಾಲಾಗಿದ್ದಾರೆ. ಗ್ರಾಮೀಣ ರೈತರು ವರ್ಷಂಪ್ರತಿ ಆಶಾದಾಯಕ ಮಳೆಯೊಂದಿಗೆ; ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಗದ್ದೆಗಳನ್ನು ಉಳುಮೆ ಮಾಡಿ; ಮುಂಗಾರುವಿನ ಭತ್ತದ ನಾಟಿ ಕೃಷಿಗೆ ಬಿತ್ತನೆಯೊಂದಿಗೆ ಈ ವೇಳೆಗೆ ಸಸಿಮಡಿಗಳನ್ನು ಸಿದ್ಧಗೊಳಿಸುತ್ತಿದ್ದರು.ಗದ್ದೆಗಳು ಕೂಡ ನೀರಾವರಿ ಕೃಷಿಗೆ ಪರಿಪಕ್ವವಾಗಿದ್ದು; ಅಗಡಿಗಳಲ್ಲಿ ಸಸಿಮಡಿ ನಾಟಿ ಕಾರ್ಯಕ್ಕೆ ಕೈಗೆಟುಕುವಷ್ಟು ಹಂತಕ್ಕೆ ಬೆಳೆದು ನಿಂತಿರುತ್ತಿತ್ತು. ಆದರೆ ಈ ವರ್ಷದ ಮಳೆಗಾಲ ತೀರಾ ವಿಳಂಬಗೊಂಡಿದ್ದು, ರೈತರು ಭವಿಷ್ಯದ ಕೃಷಿ ಚಟುವಟಿಕೆ ಕುರಿತು ಚಿಂತಾಕ್ರಾಂತರಾಗಿದ್ದಾರೆ. ವಿಶೇಷವಾಗಿ ಉತ್ತರಕೊಡಗಿನ ಪುಷ್ಪಗಿರಿ ತಪ್ಪಲು ಶ್ರೇಣಿಯ ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಬಹುತೇಕ ರೈತರು ಹಿಂದಿನ ವರ್ಷದ ತನಕವೂ; ತಮ್ಮ ಕೃಷಿ ಕಾಯಕದೊಂದಿಗೆ ಮುಂಗಾರು ಮಳೆಯ ಹಂಗಾಮುವಿನಲ್ಲಿ ತಮ್ಮನ್ನು ಈ ಹೊತ್ತಿಗೆ ಸಂಪೂರ್ಣ ತೊಡಗಿಸಿಕೊಂಡಿರುವದು ಗೋಚರಿಸುತ್ತಿತ್ತು.(ಮೊದಲ ಪುಟದಿಂದ) ಅಂತೆಯೇ ಪುಷ್ಪಗಿರಿ ತಪ್ಪಲುವಿನ ಶಾಂತಳ್ಳಿ ಹಾಗೂ ಗರ್ವಾಲೆ, ಸೂರ್ಲಬ್ಬಿ, ಮುಟ್ಲು, ಕುಂಬಾರಗಡಿಗೆ, ಕಿಕ್ಕರಳ್ಳಿ, ಮಂಕ್ಯ ಗ್ರಾಮಗಳಲ್ಲಿ ಮಳೆಗಾಲದ ನಾಟಿಗೆ ಗದ್ದೆಗಳು ಸಿದ್ಧಗೊಂಡು ಸಸಿ ಮಡಿಗಳು ಕೈಗೆಟುಕುತ್ತಿತ್ತು. ಇದೀಗ ಜೂನ್ 10 ಕಳೆದರೂ ಕೂಡ ಈ ಭಾಗಗಳಲ್ಲಿ ಸಮರ್ಪಕ ಮಳೆಯಾಗದೆ ರೈತರು ದೃತಿಗೆಟ್ಟಿದ್ದಾರೆ. ವಾಡಿಕೆಯಂತೆ ಗದ್ದೆಗಳನ್ನ ಉಳುಮೆ ಮಾಡಿ ಸಸಿ ಮಡಿಗಾಗಿ ಭತ್ತವನ್ನು ಅಗಡಿಗಳಲ್ಲಿ ಬಿತ್ತಿ 20 ದಿನಗಳೇ ಕಳೆದು ಹೋಗಿದ್ದರೂ, ಇನ್ನು ಬಾರದ ಮಳೆಯಿಂದ ಭತ್ತದ ಬೀಜ ಟಿಸಿಲೊಡೆಯದೆ ಈ ಪ್ರದೇಶಗಳಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ. ಹೀಗಾಗಿ ಭವಿಷ್ಯದೆಡೆಗೆ ಚಿಂತಿಸುತ್ತಾ ರೈತರು ಕಂಗಾಲಾಗಿ ಮುಗಿಲಿನೆಡೆಗೆ ದೃಷ್ಟಿ ನೆಟ್ಟಿದ್ದಾರೆ.
ಆತಂಕಕ್ಕೆ ಕಾರಣ : ಸೂರ್ಲಬ್ಬಿ ನಾಡಿನಲ್ಲಿ ಸಾಮಾನ್ಯವಾಗಿ ವಾಡಿಕೆಯಂತೆ ಸರಾಸರಿ 250 ಇಂಚು ಮಳೆ ಪ್ರತಿವರ್ಷ ಸುರಿಯುತ್ತದೆ ಆದರೆ ಕಳೆದ ವÀರ್ಷ ಈ ನಾಡಿನ ಸುತ್ತಮುತ್ತ 460 ಇಂಚು ದಾಖಲೆಯ ಮಳೆಯೊಂದಿಗೆ ಭತ್ತದ ನಾಟಿ ಮಾಡಲಾಗಿದ್ದ ಗದ್ದೆಗಳಲ್ಲಿ ಪೈರು ಕೊಳೆತು ತೀವ್ರ ಆಘಾತ ನೀಡಿತ್ತು. ಅನೇಕರು ಭತ್ತದ ಬೆಳೆ ಕೈಗೆಟುಕದೆ ಸುಗ್ಗಿಯ ಹುತ್ತರಿ ಹಬ್ಬ ಕೂಡ ಆಚರಿಸಲು ಸಾಧ್ಯವಾಗದೇ ಹೋಯಿತು.
ಪರಿಣಾಮ ಸಕಾಲದಲ್ಲಿ ಬೆಳೆ ಕುಯಿಲು ಸಾಧ್ಯವಿಲ್ಲದೆ; ವರ್ಷಂಪ್ರತಿ ಬೆಳೆಯುತ್ತಿದ್ದ ಬೇಸಿಗೆ ಬೆಳೆ ಕೃಷಿ ಮಾಡಲು ತನ್ನಿಂದ ಸಾಧ್ಯವಾಗಲಿಲ್ಲ ಎಂದು ರೈತ ಸಿ.ಎನ್.ಯೋಗಾತ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ಈಗ ಮತ್ತೆ ಮಳೆ ಸಿಗದಿರುವ ಕಾರಣ ಮುಂಗಾರು ಕೃಷಿಗೆ ತೀವ್ರ ಹಿನ್ನಡೆ ಉಂಟಾಗಿದೆ ಎಂದು ಓಡಿಯಂಡ ಸಾಬು, ಮೇದುರ ಅಯ್ಯಣ್ಣ, ಐಮುಡಿಯಂಡ ಕಾವೇರಪ್ಪ ನಾಪಂಡ ಅರುಣ ಅವರುಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಮಳೆಯಾದರೂ ಕಷ್ಟ : ಗ್ರಾಮೀಣ ಭಾಗದಲ್ಲಿ ಮಳೆಯಾಗದೆ ಈಗಾಗಲೇ ಕೃಷಿಗೆ ಒಂದು ತಿಂಗಳ ಹಿನ್ನೆಡೆಯಾಗಿದೆ ಎನ್ನುವ ಇವರುಗಳು; ಬಹುಶಃ ಜುಲೈ, ಆಗಸ್ಟ್‍ನಲ್ಲಿ ತೀವ್ರಗೊಳ್ಳಲಿರುವ ಮಳೆಗಾಲ ಕೃಷಿ ಚಟುವಟಿಕೆ ಗ್ರಾಮೀಣ ಪ್ರದೇಶಗಳಲ್ಲಿ ಕಷ್ಟವೆಂದು ನೆನಪಿಸುತ್ತಾರೆ. ಈ ಪ್ರದೇಶಗಳಲ್ಲಿ ದಿನವೊಂದಕ್ಕೆ ಸರಾಸರಿ 7 ರಿಂದ 8 ಇಂಚು ಮಳೆ ಸುರಿಯಲಿದೆ. ಬದಲಾಗಿ ಕಳೆದ ವರ್ಷ 20 ರಿಂದ 28 ಇಂಚು ಮಳೆ ಒಂದೇ ದಿನ ಸುರಿದಿರುವ ಭಯ ಗೋಚರಿಸಿದೆ. ಹೀಗಾಗಿ ಈ ವರ್ಷ ಮಳೆಗಾಲ ಹೇಗಿರುತ್ತದೆ ಎಂದು ಊಹಿಸಲು ಅಸಾಧ್ಯವೆಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಇನ್ನು ಸುರಿಯಬಹುದೆಂದು ನಿರೀಕ್ಷಿಸುವ ಮಳೆಯ ನಡುವೆ ಇನ್ನಷ್ಟೇ ಸಸಿಮಡಿ ಸಿದ್ಧಗೊಳಿಸಿ ನಾಟಿ ಕೆಲಸ ಆರಂಭಿಸುವ ವೇಳೆಗೆ ಸಾಕಷ್ಟು ಸಮಯ ಮೀರಲಿದ್ದು, ಮುಂಗಾರು ಕೃಷಿಗೆ ಹಿನ್ನೆಡೆಯೊಂದಿಗೆ, ಫಸಲು ಕೊಳೆಯುವ ಸಾಧ್ಯತೆಯೇ ಹೆಚ್ಚು ಎನ್ನುತ್ತಾರೆ. ಪರಿಣಾಮ ಕಳೆದ ವರ್ಷ ಮುಂಗಾರು ಮತ್ತು ಬೇಸಿಗೆ ಬೆಳೆ ಎರಡಕ್ಕೂ ತೊಡಕು ಎದುರಾಗಿದ್ದು, ಈ ಬಾರಿ ಹೇಗೆಂದು ಆ ದೇವರೇ ಬಲ್ಲ ಎಂದು ‘ಶಕ್ತಿ’ಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ.