ಬೆಂಗಳೂರು, ಜೂ.10 : ತೀವ್ರ ಅನಾರೋಗ್ಯದಿಂದ ಹಿರಿಯ ಸಾಹಿತಿ, ನಟ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ (81) ಇಂದು ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಅವರು ಇಂದು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆಯನ್ನು ಯಾವದೇ ಸರ್ಕಾರಿ ಗೌರವ ಮತ್ತು ವಿಧಿ ವಿಧಾನವಿಲ್ಲದೆ ಸರಳವಾಗಿ ನೆರವೇರಿಸಲಾಯಿತು. ಇಂದು ಮಧ್ಯಾಹ್ನ ಬೈಯಪ್ಪನಹಳ್ಳಿ ಸಮೀಪದ ಕಲ್ಲಹಳ್ಳಿ ವಿದ್ಯುತ್ ಚಿತಾಗಾರದಲ್ಲಿ ಗಿರೀಶ್ ಕಾರ್ನಾಡ್ ಅಂತ್ಯಸಂಸ್ಕಾರ ನಡೆಯಿತು. ಯಾವದೇ ಸರ್ಕಾರಿ ಗೌರವ ಬೇಡ ಎಂದು ಕುಟುಂಬ ವರ್ಗದವರು ತಿಳಿಸಿದ್ದರು. ಸರ್ಕಾರಿ ಗೌರವವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸುವದಾಗಿ ಸಚಿವ ಡಿ.ಕೆ.ಶಿವಕುಮಾರ್ (ಮೊದಲ ಪುಟದಿಂದ) ಅವರು ಮನವಿ ಮಾಡಿಕೊಂಡರೂ ಕೂಡಾ ಕುಟುಂಬ ವರ್ಗ ಅದಕ್ಕೆ ಒಪ್ಪದೆ, ಕಾರ್ನಾಡ್ ಅವರ ಅಂತಿಮ ಆಸೆಯಂತೆ ಸರಳವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು. ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ. ಶಿರಸಿಯಲ್ಲಿ ಪ್ರಾಥಮಿಕ ಶಿಕ್ಷಣ, ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪದವಿ ಶಿಕ್ಷಣ ಮುಗಿಸಿದ್ದರು.ನಂತರ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‍ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ ಕಾರ್ನಾಡರು ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಎನಿಸಿಕೊಂಡಿದ್ದಾರೆ. ಚೆನ್ನೈ ನಲ್ಲಿ ವೃತ್ತಿಜೀವನ ಪ್ರಾರಂಭಿಸಿ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ, ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿ, ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮಾ ನಿಷಾಧ - ಏಕಾಂಕ ನಾಟಕ, ಯಯಾತಿ - 1961, ತುಘಲಕ್ - 1964, ಹಯವದನ - 1972, ಅಂಜುಮಲ್ಲಿಗೆ - 1977, ಹಿಟ್ಟಿನ ಹುಂಜ ಅಥವಾ ಬಲಿ - 1980, ನಾಗಮಂಡಲ - 1990, ತಲೆದಂಡ - 1991, ಅಗ್ನಿ ಮತ್ತು ಮಳೆ - 1995, ಟಿಪ್ಪುವಿನ ಕನಸುಗಳು - 1997, ಒಡಕಲು ಬಿಂಬ - 2005, ಮದುವೆ ಅಲ್ಬಮ್, ಫ್ಲಾವರ್ಸ - 2012 ಬೆಂದ ಕಾಳು ಆನ್ ಟೋಸ್ಟ ಇವು ಅವರ ಪ್ರಮುಖ ನಾಟಕಗಳಾದರೆ ಆಡಾಡತ ಆಯುಷ್ಯ ಎಂಬುದು ಅವರ ಆತ್ಮಕಥನ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಕಾರ್ನಾಡ್ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತ ರಾದವರಲ್ಲಿ ಕಾರ್ನಾಡ್ ಮೊದಲಿಗರು. ಕಾರ್ನಾಡ್ ಅವರ ಕೃತಿಗಳು ಇಂಗ್ಲಿಷ್ ಭಾಷೆಯೂ ಸೇರಿದಂತೆ.ವಿದೇಶ ಭಾಷೆಗಳಲ್ಲಿಯೂ ಅನುವಾದವಾಗಿವೆ. ಧೀರ ರಣ ವಿಕ್ರಮ, ರುದ್ರ ತಾಂಡವ, ಸವಾರಿ-2, ಯಾರೇ ಕೂಗಾಡಲಿ. ಕಂಪೇಗೌಡ, ಆ ದಿನಗಳು, ತನನಂ ತನನಂ, ಎ.ಕೆ-47 ಮುಂತಾದ ಪ್ರಸಿದ್ಧ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳ ಸಿನಿಮಾಗಳಲ್ಲೂ ಗಿರೀಶ್ ಕಾರ್ನಾಡ್ ನಟಿಸಿದ್ದರು. ರಂಗಭೂಮಿ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್ ಸಲ್ಲಿಸಿರುವ ಸೇವೆ ಪರಿಗಣಿಸಿ ಅನೇಕ ಪುರಸ್ಕಾರಗಳು ಲಭಿಸಿದೆ. ಅವುಗಳಲ್ಲಿ .ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,, ಗುಬ್ಬಿ ವೀರಣ್ಣ ಪ್ರಶಸ್ತಿ,, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,ಪದ್ಮಶ್ರೀ -1974, ಪದ್ಮಭೂಷಣ -1992, ಜ್ಞಾನಪೀಠ -1998, ಕಾಳಿದಾಸ ಸಮ್ಮಾನ್ - 1998 ಪ್ರಮುಖವಾದವು.