ಸೋಮವಾರಪೇಟೆ, ಜೂ.7: ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ತಾ. 8ರಂದು (ಇಂದು) ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.ಸಮ್ಮೇಳನದ ಅಂಗವಾಗಿ ಶಾಂತಳ್ಳಿಯನ್ನು ಕನ್ನಡ ಧ್ವಜಗಳಿಂದ ಅಲಂಕರಿಸಲಾಗಿದ್ದು, ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಪ್ರಮುಖರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸಲಾಗಿದ್ದು, ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಶಾಂತಳ್ಳಿ ಸಿದ್ಧಗೊಂಡಿದೆ.
ಶಾಂತಳ್ಳಿಯ ಶ್ರೀಕುಮಾರ ಲಿಂಗೇಶ್ವರ ದೇವಾಲಯದ ಆವರಣದಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಿಗ್ಗೆ 8ಗಂಟೆಗೆ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವದು. ತಹಶೀಲ್ದಾರ್ ಗೋವಿಂದರಾಜು ಅವರು ರಾಷ್ಟ್ರಧ್ವಜ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರು ಪರಿಷತ್‍ನ ಧ್ವಜಗಳನ್ನು ಆರೋಹಣ ಮಾಡಲಿದ್ದಾರೆ.
ಸಮ್ಮೇಳನದ ಅಂಗವಾಗಿ ಶಾಂತಳ್ಳಿಯಲ್ಲಿ ವಿವಿಧ ದ್ವಾರಗಳನ್ನು ನಿರ್ಮಿಸಲಾಗಿದೆ. ಬೆಳಿಗ್ಗೆ 9 ಗಂಟೆಗೆ ತಲ್ತರೆಶೆಟ್ಟಳ್ಳಿ ಕೂಡುರಸ್ತೆಯಿಂದ ಸಮ್ಮೇಳನಾಧ್ಯಕ್ಷರಾದ ಡಾ. ಹೆಬ್ಬಾಲೆ ಕೆ. ನಾಗೇಶ್ ಅವರ ಮೆರವಣಿಗೆ ನಡೆಯಲಿದೆ. ಹರಗದ ಅಪ್ಪಯ್ಯ ಸಭಾಂಗಣ ಮತ್ತು ಗೌಡನ ದೊಡ್ಡಯ್ಯ ಪ್ರಧಾನ ವೇದಿಕೆಯನ್ನು ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಉದ್ಘಾಟಿಸಲಿದ್ದು, ಸಮ್ಮೇಳನವನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಲಿದ್ದಾರೆ.
ಸಮ್ಮೇಳನದಲ್ಲಿ ಸಂಸದ ಪ್ರತಾಪ್‍ಸಿಂಹ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ನಿಕಟಪೂರ್ವ ಸಮ್ಮೇಳನಾಧ್ಯಕ್ಷೆ ಜಲಾ ಕಾಳಪ್ಪ, ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಲೇಖಕಿ ಶ.ಗ. ನಯನತಾರ ಅವರು ರಚಿಸಿರುವ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಪರಿಸರದ ಸಾಂಸ್ಕøತಿಕ ಸಂಪತ್ತು ಪುಸ್ತಕ ಮತ್ತು ಹೆಬ್ಬಾಲೆ ನಾಗೇಶ್ ಅವರ ಕೊಡವರ ಸಾಂಸ್ಕøತಿಕ ಪದಕೋಶ ಮತ್ತು ಮೌಖಿಕ ಸಂಸ್ಕøತಿ ಪುಸ್ತಕಗಳ ಬಿಡುಗಡೆ ಸಮಾರಂಭವೂ ಸಮ್ಮೇಳನದಲ್ಲಿ ನಡೆಯಲಿದೆ.
ಮಧ್ಯಾಹ್ನ 1.30ಕ್ಕೆ ಕನ್ನಡ ಗೀತೆ ಗಾಯನ, 2.30ಕ್ಕೆ ವಿಚಾರಗೋಷ್ಠಿ, 3.30ಕ್ಕೆ ಕವಿಗೋಷ್ಠಿ, ಸಂಜೆ 5 ಗಂಟೆಗೆ ಬಹಿರಂಗ ಅಧಿವೇಶನ, 5.15ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ಮಾಜೀ ಸಚಿವ ಬಿ.ಎ. ಜೀವಿಜಯ, ಶ್ರೀ ಸದಾಶಿವ ಸ್ವಾಮೀಜಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಸಾಪದಿಂದ ತಾಲೂಕಿನ ಗ್ರಾಮೀಣ ಪ್ರದೇಶ ಶಾಂತಳ್ಳಿಯಲ್ಲಿ ಕನ್ನಡ ನುಡಿಹಬ್ಬ ಆಯೋಜಿಸಿರುವದು ಆ ಭಾಗದ ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ತಂದಿದ್ದು, ಹೋಬಳಿ ವ್ಯಾಪ್ತಿಯ ಗ್ರಾಮಸ್ಥರೆಲ್ಲರೂ ಕಾರ್ಯಕ್ರಮಕ್ಕೆ ಕೈಜೋಡಿಸಿದ್ದಾರೆ.