ಮಡಿಕೇರಿ, ಜೂ. 7: ಕಳೆದ ವರ್ಷ ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಅನೇಕ ಮನೆಗಳ ಹಾನಿ ಮತ್ತು ಭೂಕುಸಿತ ಉಂಟಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಗದ್ದೆ, ತೋಟಗಳು ಕೊಚ್ಚಿ ಹೋಗಿದ್ದು, ಕೆಲವು ಭಾಗಗಳಲ್ಲಿ ಗದ್ದೆ ತೋಟಗಳಲ್ಲಿ ಮಣ್ಣು ತುಂಬಿಕೊಂಡು ಇನ್ನೂ ಕೆಲವು ಭಾಗಗಳಲ್ಲಿ ಅತಿಯಾದ ಮಳೆಯಿಂದ ಫಸಲು ಕೊಳೆತು ಹೋಗಿ ಅಪಾರ ಬೆಳೆಹಾನಿ ಸಂಭವಿಸಿದ ಪ್ರಕರಣಗಳಲ್ಲಿ ಸರ್ಕಾರವು ಆದ್ಯತೆ ಮೇರೆಗೆ ಪರಿಹಾರವನ್ನು ನೇರ ಪಾವತಿ ಮೂಲಕ 33920 ಸಂತ್ರಸ್ತರಿಗೆ 44,929 ಕೋಟಿ ರೂ.ಗಳನ್ನು ಸಂತ್ರಸ್ತರ ಆಧಾರ್ ಜೋಡಣೆ ಆದ ಬ್ಯಾಂಕ್ ಖಾತೆಗಳಿಗೆ ಆಧಾರ್ ಬೇಸ್ಡ್ ಪೇಮೆಂಟ್ ಮೂಲಕ ಜಮೆ ಮಾಡಲಾಗಿದೆ.
33,920 ಪ್ರಕರಣಗಳ ಪೈಕಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಆಗದ ಮತ್ತು ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಕಾರಣ 2,191 ಪ್ರಕರಣಗಳಲ್ಲಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಸರ್ಕಾರದಿಂದ ಹಣವನ್ನು ಜಮೆ ಮಾಡಲಾಗಿದ್ದರೂ ಸಹ ರೂ. 2.58 ಕೋಟಿ ಮೊತ್ತವು ವಾಪಸ್ ಬಂದಿರುತ್ತದೆ. 2,191 ಪ್ರಕರಣಗಳ ಪಟ್ಟಿಯನ್ನು ಕೊಡಗು ಜಿಲ್ಲಾ ವೆಬ್‍ಸೈಟ್ hಣಣಠಿs://ಞoಜಚಿgu.ಟಿiಛಿ.iಟಿ ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸಲಾಗಿದೆ.
ಬೆಳೆ ಪರಿಹಾರ ಪಾವತಿಯಾಗಿರದ ಫಲಾನುಭವಿಗಳು ಪಟ್ಟಿಯನ್ನು ಪರಿಶೀಲಿಸಿಕೊಂಡು, ತಮ್ಮ ಖಾತೆಗೆ ಹಣ ಜಮೆಯಾಗದಿರುವ ಕಾರಣವನ್ನು ತಿಳಿದು, ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗಳಿಗೆ ಜೋಡಣೆಯಾಗದಿದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್‍ನ್ನು ಸಂಪರ್ಕಿಸಿ ಆಧಾರ್ ಸಂಖ್ಯೆ ಜೋಡಣೆಗೆ ಕ್ರಮ ವಹಿಸುವದು. ಅದೇ ರೀತಿ ಆಧಾರ್ ಸಂಖ್ಯೆ ನಿಷ್ಕ್ರಿಯವಾದ ಪ್ರಕರಣಗಳಲ್ಲಿ ಸಂಬಂಧಪಟ್ಟ ಆಧಾರ್ ಕೇಂದ್ರಗಳಲ್ಲಿ (ನಾಡ ಕಚೇರಿಗಳು, ಗ್ರಾಮ ಪಂಚಾಯತ್‍ಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸ್ಪಂದನಾ ಕೇಂದ್ರದಲ್ಲಿ) ಆಧಾರ್ ಸಂಖ್ಯೆಯನ್ನು ಸಕ್ರಿಯಗೊಳಿಸಲು ಕ್ರಮ ವಹಿಸುವದು. ಈ ಪ್ರಕ್ರಿಯೆ ಮುಗಿದ ನಂತರ ಹಣ ವಾಪಸ್ ಆದ ಪ್ರಕರಣಗಳಲ್ಲಿ ಫಲಾನುಭವಿಗಳ ಖಾತೆಗೆ ಹಣವನ್ನು ಮರು ಜಮೆ ಮಾಡಲು ಕ್ರಮ ವಹಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.