ಶನಿವಾರಸಂತೆ, ಜೂ. 8: ಕೊಡ್ಲಿಪೇಟೆಯ ಶ್ರೀ ರುಕ್ಮಿಣಿ ಪಾಂಡುರಂಗ ದೇವಸ್ಥಾನದ ಕಲಶ ಪ್ರತಿಷ್ಠಾಪನೆ ಮತ್ತು ಜೀರ್ಣೋದ್ಧಾರ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿ ಯಿಂದ ಜರುಗಿತು.

ಬೆಳಿಗ್ಗೆ ಕಾಕಾಡಾರತಿ, ಗಂಗಾಪೂಜೆ ನಡೆದು ಕೊಡ್ಲಿಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮಹಿಳೆಯ ರಿಂದ ಕುಂಭ ಮೆರವಣಿಗೆ ನಡೆಯಿತು.

ನಂತರ ದೇವಾಲಯದ ಪ್ರಾಂಗಣದಲ್ಲಿ ಗಣಪತಿ ಹೋಮ, ಪ್ರತಿಷ್ಠಾಹೋಮ, ಶ್ರೀದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿನಿಯೋಗ ನಡೆಯಿತು. ಕಾಫಿ ಬೆಳೆಗಾರ ಎಸ್.ಎಸ್. ವರಪ್ರಸಾದ್ ಮತ್ತು ಬೆಂಗಳೂರಿನ ನಾರಾಯಣರಾವ್ ಶೇಂಡಿಗೆ ಸಹಭಾಗಿತ್ವದಲ್ಲಿ ದಾಸೋಹ ಏರ್ಪಡಿಸಲಾಗಿತ್ತು.

ಬುಧವಾರ ರಾತ್ರಿಯೂ ಪೋತಿ ಸ್ಥಾಪನೆ, ಜ್ಞಾನೇಶ್ವರಿ ಪಾರಾಯಣ, ಭಜನೆ ಮತ್ತು ಕೀರ್ತನೆಗಳು ನಡೆದು ಪ್ರಾರ್ಥನೆ, ಸ್ಥಳ ಶುದ್ಧಿ, ಸುದರ್ಶನ ಹೋಮ, ವಾಸ್ತುಬಲಿ, ದಿಕ್ಷಾಲ ಬಲಿ ರಕ್ಷೆ ಪೂಜಾ ಕಾರ್ಯಕ್ರಮ ನಡೆದವು. ಎರಡು ದಿನಗಳ ಪೂಜಾ ಕೈಂಕರ್ಯ ಗಳು ಸುಬ್ರಮಣಿ ಬಳ್ಳಕ್ಕುರಾಯ ನೇತೃತ್ವದಲ್ಲಿ ಜರುಗಿತು.

ಕೊಡ್ಲಿಪೇಟೆಯ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ದೇವರಿಗೆ ಕಂಚಿನ ಪ್ರಭಾವಳಿಯ ಕೊಡುಗೆ ನೀಡಿದರು.

ಉತ್ಸವದ ಪ್ರಯುಕ್ತ ಭಜನೆ, ಮೆರವಣಿಗೆ ಹಾಗೂ ಹಾಸನದ ಕೆ.ಎಸ್. ಶೇಷಗಿರಿರಾವ್ ಕೊರಡೆ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ರುಕ್ಮಿಣಿ ಪಾಂಡುರಂಗ ಸೇವಾ ಸಮಿತಿ ಪದಾಧಿಕಾರಿಗಳು, ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಡಿ. ಮೋಹನ್ ಕುಮಾರ್ ಕೋಳೆಕರ್, ಉಪಾಧ್ಯಕ್ಷ ಕೆ.ಎಸ್. ವಾಸುದೇವರಾವ್ ಕೋಳೆಕರ್, ಕಾರ್ಯದರ್ಶಿ ಜಿ.ಆರ್. ಕಾಂತರಾಜ್ ಗುಜರ್ ಹಾಗೂ ಇತರರು ಪಾಲ್ಗೊಂಡಿದ್ದರು.