ಸೋಮವಾರಪೇಟೆ, ಜೂ. 8: ಪುಷ್ಪಗಿರಿ ತಪ್ಪಲಿನ ನಾಡು, ಪ್ರಾಕೃತಿಕ ಸೌಂದರ್ಯದ ಬೀಡು, ಹಚ್ಚಹಸಿರಿನ ಪರಿಸರದ ನಡುವೆ ಶಾಂತವಾಗಿ ಹರಡಿ ಕೊಂಡಿರುವ, ಶ್ರೀಕುಮಾರಲಿಂಗೇಶ್ವರ ದೇವರ ನೆಲೆಯಾದ ಶಾಂತಳ್ಳಿ ಗ್ರಾಮದಲ್ಲಿ ಇಂದು ಆಯೋಜನೆ ಗೊಂಡಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಮನಸ್ಸುಗಳಲ್ಲಿ ಹಬ್ಬದ ಸಂಭ್ರಮಕ್ಕೆ ಕಾರಣವಾಯಿತು.ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲೆ ಮತ್ತು ತಾಲೂಕು ಘಟಕದ ವತಿಯಿಂದ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಸಹಕಾರದಿಂದ ಆಯೋಜಿಸಲಾಗಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಶ್ರೀಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರು ರಾಷ್ಟ್ರಧ್ವಜ, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್‍ಸಾಗರ್ ನಾಡಧ್ವಜ, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ಅವರು ಪರಿಷತ್‍ನ ಧ್ವಜಗಳನ್ನು ಆರೋಹಣ ಮಾಡುವ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.
ಕನ್ನಡದ ಹಬ್ಬಕ್ಕಾಗಿ ಶಾಂತಳ್ಳಿ ಮುಖ್ಯರಸ್ತೆಯನ್ನು ತಳಿರುತೋರಣ, ಬಾಳೆ ಗಿಡ, ಕನ್ನಡ ಧ್ವಜಗಳಿಂದ ಅಲಂಕರಿಸಲಾಗಿತ್ತು. ಪ್ರಾಕೃತಿಕ ಮಡಿಲಿನ ಶಾಂತಳ್ಳಿಯ ಎಲ್ಲೆಡೆ ಕನ್ನಡ ಬಣ್ಣವೇ ಕಾಣುತ್ತಿತ್ತು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಶಾಂತಳ್ಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸಮ್ಮೇಳನ ಕಾರಣವಾಯಿತು.
ಶಾಂತಳ್ಳಿ ಸೇರಿದಂತೆ ಬೆಟ್ಟದಳ್ಳಿ, ತಲ್ತರೆಶೆಟ್ಟಳ್ಳಿ, ತೋಳೂರುಶೆಟ್ಟಳ್ಳಿ ವ್ಯಾಪ್ತಿಯ ಕನ್ನಡಾಭಿಮಾನಿಗಳು ತಮ್ಮ ಮನೆಯ ಹಬ್ಬದಂತೆ ಕನ್ನಡ ನುಡಿ ಹಬ್ಬದಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಈ ಭಾಗದ ಶಾಲಾ ಮಕ್ಕಳು ಸಮವಸ್ತ್ರ ಸಹಿತ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡಾಂಬೆಗೆ ಜೈಕಾರ ಹಾಕಿದರು.
ಸಮ್ಮೇಳನದ ಅಂಗವಾಗಿ ತಲ್ತರೆಶೆಟ್ಟಳ್ಳಿ ಜಂಕ್ಷನ್‍ನಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಉದ್ಯಮಿಗಳಾದ ಅರುಣ್ ಕೊತ್ನಳ್ಳಿ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಈ ಸಂದರ್ಭ ಉದ್ಯಮಿ ಗಿರೀಶ್ ಮಲ್ಲಪ್ಪ, ವಿಎಸ್‍ಎಸ್‍ಎನ್ ನಿರ್ದೇಶಕ ಕೆ.ಕೆ. ಗೋಪಾಲ್ ಉಪಸ್ಥಿತರಿದ್ದರು.
7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಹೆಬ್ಬಾಲೆ ನಾಗೇಶ್, ಪತ್ನಿ ದಾಕ್ಷಾಯಿಣಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್, ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್, ವಿಧಾನ ಪರಿಷತ್
(ಮೊದಲ ಪುಟದಿಂದ) ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಅವರುಗಳು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕಾರ್ಯಕ್ರಮ ಆಯೋಜನೆಗೊಂಡಿದ್ದ ಶ್ರೀಕುಮಾರಲಿಂಗೇಶ್ವರ ದೇವಾಲಯ ಆವರಣಕ್ಕೆ ಬಂದರು.
ಮೆರವಣಿಗೆಯಲ್ಲಿ ಮಕ್ಕಳು, ಮಹಿಳೆಯರು ಪೂರ್ಣಕುಂಭ ಕಳಸದೊಂದಿಗೆ ಭಾಗವಹಿಸಿದ್ದರೆ, ಡೊಳ್ಳುಕುಣಿತ, ತೋಳೂರುಶೆಟ್ಟಳ್ಳಿ ಕಲಾವಿದರ ಸುಗ್ಗಿ ಕುಣಿತ, ವೀರಗಾಸೆ ನೃತ್ಯಗಳು ಗಮನ ಸೆಳೆದವು. ಮಂಗಳವಾದ್ಯಗಳೊಂದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸ್ತ್ರೀ ಶಕ್ತಿ ಸಂಘಗಳ ಸದಸ್ಯರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ವಿವಿಧ ಭಾಷೆಯನ್ನಾಡುವ ಮಂದಿ ಕನ್ನಡ ಹಬ್ಬದಲ್ಲಿ ಕನ್ನಡಿ ಗರಾಗಿಯೇ ಮಿಳಿತು ಭಾಷಾಭಿಮಾನ ಮೆರೆದರು. ಪುಟ್ಟ ಮಕ್ಕಳು ‘ಕನ್ನಡಕ್ಕೆ ಜೈ, ಕನ್ನಡಾಂಬೆಗೆ ಜೈ, ಜೈ ಕರ್ನಾಟಕ’ ಎಂದು ಘೋಷಣೆ ಮೊಳಗಿಸಿದರು.
ಸಮ್ಮೇಳನದ ಅಂಗವಾಗಿ ಶಾಂತಳ್ಳಿ ವ್ಯಾಪ್ತಿಯಲ್ಲಿ ನಾಡುನುಡಿ, ನೆಲಜಲ, ಸಂಸ್ಕøತಿಗೆ ಸಂಬಂಧಿಸಿದಂತೆ ಗಣನೀಯ ಸೇವೆ ಸಲ್ಲಿಸಿದ ಮಹನೀಯರ ಹೆಸರಿನಲ್ಲಿ ದ್ವಾರಗಳನ್ನು ನಿರ್ಮಿಸಿ ಅವರ ಸೇವೆಯನ್ನು ಸ್ಮರಿಸುವ ಪ್ರಯತ್ನ ನಡೆಯಿತು.
ಬಸವನಕಟ್ಟೆ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಹರಪಳ್ಳಿ ಸುಬ್ಬಯ್ಯ ಮಾಸ್ತರ ದ್ವಾರವನ್ನು ಉದ್ಯಮಿಗಳು ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ಉದ್ಘಾಟಿಸಿದರು. ತಲ್ತರೆಶೆಟ್ಟಳ್ಳಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಬಗ್ಗನ ಪೂವಯ್ಯ ದ್ವಾರವನ್ನು ಶಾಂತಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಸುನಂದ ಆನಂದ ಉದ್ಘಾಟಿಸಿದರು. ಉದ್ಯಮಿ ಅರುಣ್ ಕೊತ್ನಳ್ಳಿ, ಶಾಂತಳ್ಳಿ ಗ್ರಾ.ಪಂ. ಸದಸ್ಯ ಜ್ಞಾನೇಶ್, ವಿಎಸ್‍ಎಸ್‍ಎನ್ ನಿರ್ದೇಶಕ ಬಿ.ಇ. ಜಯೇಂದ್ರ ಅವರುಗಳು ಉಪಸ್ಥಿತರಿದ್ದರು.
ಶಾಂತಳ್ಳಿ ಪಂಚಾಯ್ತಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಸೀತಾರಾಮಯ್ಯ ದ್ವಾರವನ್ನು ವಿಎಸ್‍ಎಸ್‍ಎನ್ ಉಪಾಧ್ಯಕ್ಷೆ ಕೆ.ಎಸ್. ಚಂದ್ರಾವತಿ ಉದ್ಘಾಟಿಸಿದರು. ಸೀತಾರಾಮಯ್ಯ ಅವರ ಸೊಸೆ ವೀಣಾ ಪ್ರಭಾಕರ್, ಗ್ರಾ.ಪಂ. ಸದಸ್ಯ ತ್ರಿಶೂಲ್, ವಿಎಸ್‍ಎಸ್‍ಎನ್ ನಿರ್ದೇಶಕ ರಾಜೇಶ್ ಭಾಗವಹಿಸಿದ್ದರು. ಆಸ್ಪತ್ರೆ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಕೆ.ಎಂ. ಮಾಚಯ್ಯ ದ್ವಾರವನ್ನು ತಾ.ಪಂ. ಸದಸ್ಯ ಧರ್ಮಪ್ಪ ಉದ್ಘಾಟಿಸಿದರು. ಪ್ರಮುಖರಾದ ಕೆ.ಎಂ. ಲೋಕೇಶ್ ಉಪಸ್ಥಿತರಿದ್ದರು.
ಬೆಟ್ಟದಳ್ಳಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ದೊಡ್ಡಂದ್ರ ಪೊನ್ನಪ್ಪ ದ್ವಾರವನ್ನು ಗ್ರಾ.ಪಂ. ಉಪಾಧ್ಯಕ್ಷೆ ಕುಮಾರಿ ದಿನೇಶ್ ಉದ್ಘಾಟಿಸಿದರು. ಸಮ್ಮೇಳನದ ಆವರಣದಲ್ಲಿ ತೆರೆಯಲಾಗಿದ್ದ ಪುಸ್ತಕ ಮಳಿಗೆಯನ್ನು ತಾ.ಪಂ. ಮಾಜೀ ಅಧ್ಯಕ್ಷ ಕೆ.ಎಂ. ಲೋಕೇಶ್, ಸುದ್ದಿಮನೆಯನ್ನು ಪತ್ರಕರ್ತ ಹಿರಿಕರ ರವಿ, ಸಮ್ಮೇಳನದ ಆವರಣದಲ್ಲಿ ನಿರ್ಮಿಸಿದ್ದ ಶ್ರೀಕುಮಾರಲಿಂಗೇಶ್ವರ ಮುಖ್ಯದ್ವಾರವನ್ನು ಜಿ.ಪಂ. ಸದಸ್ಯ ಬಿ.ಜೆ. ದೀಪಕ್ ಉದ್ಘಾಟಿಸಿದರು. ಸಮ್ಮೇಳನ ಆಯೋಜನೆಗೊಂಡಿದ್ದ ಪ್ರಧಾನ ವೇದಿಕೆಯನ್ನು ಮಾಜೀ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಹರಗದ ಅಪ್ಪಯ್ಯ ಸಭಾಂಗಣವನ್ನು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉದ್ಘಾಟಿಸಿದರು.
ಭೌಗೋಳಿಕವಾಗಿ ಹಲವಷ್ಟು ವೈಶಿಷ್ಟ್ಯಗಳನ್ನು ಹೊಂದಿರುವ ಶಾಂತಳ್ಳಿ ಹೋಬಳಿಯಲ್ಲಿ ಕೃಷಿಕ ವರ್ಗವೇ ಅಧಿಕವಿದ್ದು, ಗ್ರಾಮೀಣ ಭಾಗದಲ್ಲಿ ಇಂದಿಗೂ ಕನ್ನಡ ಸಾಹಿತ್ಯ, ಭಾಷೆ, ಕಲೆಗಳು ಅಳಿಯದೇ ಉಳಿದಿವೆ. ಕನ್ನಡವನ್ನು ಅತೀ ಹೆಚ್ಚು ಬಳಸುವ ಹೋಬಳಿಗಳಲ್ಲಿ ಶಾಂತಳ್ಳಿ ಹೋಬಳಿ ಪ್ರಥಮ ಸ್ಥಾನದಲ್ಲಿದೆ ಎಂದರೂ ಅತಿಶಯೋಕ್ತಿಯಲ್ಲ.
ಈ ವ್ಯಾಪ್ತಿಯಲ್ಲಿ ಇಂದಿಗೂ ನಡೆಯುವ ಸುಗ್ಗಿ ಹಬ್ಬ, ಗ್ರಾಮದೇವತೆಯ ಪೂಜೆ, ಸುಗ್ಗಿಕುಣಿತ, ಧಾರ್ಮಿಕ ಆಚರಣೆಗಳು ಕನ್ನಡ ಸಂಸ್ಕøತಿಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಶಾಂತಳ್ಳಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜನೆಗೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಜರುಗಿ ಯಶಸ್ಸುಕಂಡಿತು.
- ವಿಜಯ್ ಹಾನಗಲ್