ಕುಶಾಲನಗರ, ಜೂ. 7: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 11ನೇ ನೂತನ ಶಾಖೆ ಕುಶಾಲನಗರದಲ್ಲಿ ಪ್ರಾರಂಭಗೊಳ್ಳಲಿದೆ ಎಂದು ಸೊಸೈಟಿಯ ಅಧ್ಯಕ್ಷ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೈಚನಹಳ್ಳಿಯ ಆತ್ಮೀಯ ಕಾಂಪ್ಲೆಕ್ಸ್‍ನಲ್ಲಿ ನೂತನ ಶಾಖೆ ಈ ತಿಂಗಳ 9 ರಂದು ಲೋಕಾರ್ಪಣೆಗೊಳ್ಳಲಿದೆ. ಅಂದು ಬೆಳಗ್ಗೆ 10.15 ಕ್ಕೆ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಲಿದ್ದು, ಗಣಕೀಕರಣದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ನೆರವೇರಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ಬಿ.ಎ.ಜೀವಿಜಯ ಉದ್ಘಾಟಿಸಲಿದ್ದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್‍ಕುಮಾರ್ ಪ್ರಥಮ ಪಾಲುಪತ್ರವನ್ನು, ಪೊಲೀಸ್ ಉಪ ಅಧೀಕ್ಷಕ ಪಿ.ಕೆ.ಮುರಳೀಧರ್ ಮತ್ತು ಪಪಂ ಸದಸ್ಯರಾದ ರೇಣುಕಾ ಪ್ರಥಮ ಸಾಲ ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಿದರು.
ಸೊಸೈಟಿ ಅಧ್ಯಕ್ಷ ಕೆ.ಸಿ.ನಾರಾಯಣ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಂಬೆಕೋಡಿ ಲವಕುಮಾರ್, ವಕೀಲ ತೆಕ್ಕಡೆ ನೇಮಿರಾಜು, ಕಟ್ಟಡ ಮಾಲೀಕರಾದ ಡಿ.ಎಚ್.ರುಕ್ಮಿಣಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುಳ್ಯದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸೊಸೈಟಿ 1997 ರಲ್ಲಿ 430 ಸದಸ್ಯರಿಂದ ರೂ. 5,95,300 ಪಾಲು ಬಂಡವಾಳದಿಂದ ಪ್ರಾರಂಭಗೊಂಡಿತ್ತು. ಸಹಕಾರ ಸಂಘ ಪ್ರಸ್ತುತ 10,668 ಸದಸ್ಯರನ್ನು ಹೊಂದಿದ್ದು ರೂ. 2.48 ಕೋಟಿ ಪಾಲು ಬಂಡವಾಳ, 64.48 ಕೋಟಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರು 52.85 ಕೋಟಿ ವಿವಿಧ ರೂಪದ ಸಾಲಗಳನ್ನು ವಿತರಿಸಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ಪಿ.ಸಿ.ಜಯರಾಮ, ನಿರ್ದೇಶಕರುಗಳಾದ ಜಾಕೆ ಸದಾನಂದ, ನಿತ್ಯಾನಂದ ಮುಂಡೋಡಿ, ಚಂದ್ರಾ ಕೋಲ್ಚಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಕುಂಬಗೌಡನ ಪ್ರಸನ್ನ ಉಪಸ್ಥಿತರಿದ್ದರು.