ಸೋಮವಾರಪೇಟೆ, ಜೂ. 8: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಂತಳ್ಳಿಯಲ್ಲಿ ಆಯೋಜಿಸಲಾಗಿದ್ದ 7ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಹೆಬ್ಬಾಲೆ ಗ್ರಾಮದ ಡಾ. ಕೆ. ನಾಗೇಶ್ ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿ, ಆಚಾರ ವಿಚಾರ ಸೇರಿದಂತೆ ಕನ್ನಡಿಗರ ಉದ್ಯೋಗ, ಸರ್ವಾಂಗೀಣ ಬೆಳವಣಿಗೆಯ ಬಗ್ಗೆ ಕಾಳಜಿಯ ನುಡಿಗಳನ್ನಾಡಿದರು.

ಕನ್ನಡ ಭಾಷೆ ಅವನತಿಯ ಅಂಚಿನಲ್ಲಿದೆ ಎಂಬದು ಸತ್ಯಕ್ಕೆ ದೂರವಾಗಿದೆ. ಕನ್ನಡಿಗರು ಎಲ್ಲಿಯವರೆಗೆ ಕರ್ನಾಟಕದಲ್ಲಿ ಇರುತ್ತಾರೆಯೋ ಅಲ್ಲಿಯವರೆಗೆ ಕನ್ನಡ ಭಾಷೆಗೆ ಯಾವದೇ ತೊಂದರೆ ಇಲ್ಲ. ಸಂಸ್ಕøತ ಭಾಷೆ ತನ್ನೊಳಗೆ ಕೊಡುಕೊಳ್ಳುವಿಕೆಯ ಸಂಬಂಧವನ್ನು ಕಡಿದುಕೊಂಡ ಫಲವಾಗಿ ಅವನತಿಯನ್ನು ತಂದುಕೊಂಡಿತು ಎಂದು ವಿಶ್ಲೇಷಿಸಿದರು.

ಕನ್ನಡ ಭಾಷೆ ತನ್ನ ಸುತ್ತಲಿನ ಭಾಷೆಗಳಾದ ತೆಲುಗು, ತಮಿಳು, ಮಲಯಾಳಂ, ತುಳು ಸೇರಿದಂತೆ ಇಂಗ್ಲೀಷ್, ಹಿಂದಿ ಮುಂತಾದ ಭಾಷೆಗಳ ಜತೆಯಲ್ಲಿ ಉತ್ತಮ ಭಾಷಾ ಸಂಬಂಧವನ್ನು ಇಟ್ಟುಕೊಂಡಿದೆ. ಬೇರೆ ಭಾಷೆಗಳಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಅನುವಾದವಾಗುತ್ತಿದೆ. ಇದು ಕನ್ನಡ ಭಾಷೆ ಉಳಿವಿಗೆ ಹೆಚ್ಚಿನ ಸಹಕಾರಿಯಾಗಿದೆ. ಈ ಹಿನ್ನೆಲೆ ಭಾಷಾ ಅಸ್ತಿತ್ವ ಕನ್ನಡಕ್ಕಿದೆ ಎಂದರು.

ಕನ್ನಡಿಗರ ಮುಂದಿರುವ ಸವಾಲುಗಳ ಬಗ್ಗೆಯೂ ತಮ್ಮ ಮಾತಿ ನಲ್ಲಿ ಪ್ರಸ್ತಾಪಿಸಿದ ಸಮ್ಮೇಳನಾಧ್ಯಕ್ಷರು, ಒಂದರಿಂದ ಏಳನೇ ತರಗತಿಯವರೆಗೆ ಎಲ್ಲರಿಗೂ, ಎಲ್ಲೆಡೆಯೂ ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು. ಮಕ್ಕಳ ಕಲ್ಪನಾಶೀಲತೆ, ಸೃಜನಶೀಲತೆ ಸೊರಗುತ್ತಿದ್ದು, ಪಾಠಗಳನ್ನು ಉರು ಹಚ್ಚುವ ಯಂತ್ರಗಳಾಗಿ ಬೆಳೆಯುತ್ತಿರು ವದು ಸರಿಯಲ್ಲ ಎಂದರು.

ಕನ್ನಡದ ಸಬಲೀಕರಣಕ್ಕೆ ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸುವದೇ ಏಕೈಕ ಮಾರ್ಗ. ಮಾತೃಭಾಷಾ ಮಾಧ್ಯಮದ ಶಿಕ್ಷಣದಿಂದ ಮಗುವಿನ ಭೌದ್ಧಿಕ ಸಾರ್ಮಾಥ್ಯ ವಿಸ್ತರಿಸುತ್ತದೆ. ಆಂಗ್ಲ ಮಾಧ್ಯಮದ ಪ್ರಭಾವದಿಂದ ಭಾವನಾತ್ಮಕವಾಗಿ ಮತ್ತು ಭೌತಿಕವಾಗಿ ಸೊರಗುತ್ತಿರುವ ಕನ್ನಡ ಶಾಲೆಗಳನ್ನು ಶಕ್ತಗೊಳಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಾದ ಆಗತ್ಯ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದು ಅಭಿಪ್ರಾಯಿಸಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗುತ್ತಿದ್ದು, ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು ಎಂದು ಪ್ರತಿಪಾದಿಸಿದರು.

ಎಲ್ಲೆಡೆ ಇಂಗ್ಲೀಷ್ ಭಾಷೆ ಪ್ರಾಬಲ್ಯ ಸಾಧಿಸಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡ ಭಾಷಿಕರು ಬಹುದೊಡ್ಡ ಸಮಸ್ಯೆ ಎದುರಿಸುತ್ತಿದ್ದಾರೆ. ಕನ್ನಡಿಗರು ನಿರುದ್ಯೋಗಿಗಳಾಗುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಕೆಲಸಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮೊದಲ ಆದ್ಯತೆ ನೀಡಬೇಕಿದೆ ಎಂದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲೀಷ್ ಹಾಗೂ ಇತರ ಭಾಷೆಗಳಂತೆ ಕನ್ನಡವನ್ನು ತಾಂತ್ರೀಕವಾಗಿ ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಪ್ರಯೋಗಗಳು ನಡೆದು ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡವನ್ನು ಬಳಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಪ್ರಾಥಮಿಕ ಹಂತದಿಂದಲೇ ಕನ್ನಡವನ್ನು ಒಂದು ಮಾಧ್ಯಮವಾಗಿ ಕಲಿಸಬೇಕು. ಜತೆಗೆ ಇಂಗ್ಲೀಷನ್ನು ಒಂದು ವಿಷಯವಾಗಿ ಕಲಿಸುವ ಮೂಲಕ ಮಕ್ಕಳು ಹಾಗೂ ಪೋಷಕರಲ್ಲಿರುವ ಇಂಗ್ಲೀಷ್ ಮಾಧ್ಯಮದ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡಬೇಕು. ಸರ್ಕಾರ ಹಾಗೂ ಪ್ರಭುತ್ವಗಳೂ ತಮ್ಮ ಆಡಳಿತದ ಪ್ರತಿ ಹಂತದಲ್ಲಿಯೂ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಆದೇಶ, ಸುತ್ತೋಲೆ, ಪತ್ರಗಳು, ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ಕನ್ನಡ ಭಾಷೆಯಲ್ಲಿಯೇ ನಡೆಸಬೇಕು ಎಂದು ಪ್ರತಿಪಾದಿಸಿದರು.