ಮಡಿಕೇರಿ, ಜೂ. 8: ಸೂರ್ಯಾಸ್ತಗೊಂಡು, ಒಂದಷ್ಟು ಮಳೆ ಸುರಿದು, ಕತ್ತಲು ಆವರಿಸುತ್ತಿದ್ದಂತೇ ಬೆಳಗಿದ ಹಣತೆಗಳೆÀದುರು ಮೋಡಿಯ ಗಾಯನ ಒಂದಷ್ಟು ಕಲಾಭಿಮಾನಿಗಳ ಹೃದಯ ಗೆದ್ದಿತು.
ನಿನ್ನೆ ಸಂಜೆ ಕುಶಾಲನಗರ ನಿಸರ್ಗಧಾಮದಲ್ಲಿ ಅಪರೂಪದ ಗಾಯಕ, ದಕ್ಷಿಣ ಕನ್ನಡ ಮಣಿನಾಲ್ಕೂರಿನ ನಾದ ಅವರಿಂದ ವಿಶೇಷ ‘ಕತ್ತಲ ಗಾಯನ’ ಏರ್ಪಡಿಸಲಾಗಿತ್ತು. ನಾದ ಅವರ ಹಾಡು, ಏಕತಾನ ದೀಪದ ಬೆಳಕಿನ ನಡುವೆ ಮರೆಮರೆಯಾಗಿ ಕುಳಿತಿದ್ದ ಕಲಾಭಿಮಾನಿಗಳ ಚಿಂತನೆ ಕೆದರಿಸಿತು.
‘‘ಏಕಾಂಗಿಯಾಗಿ ಹೊರಟುಬಿಡು ಜೊತೆ ಯಾರಾದರೂ ಸಿಕ್ಕಾರು’’, ಬೋಧನೆಗಳೆಲ್ಲ ಬೇರೆಯವರಿಗೆ, ಬೋಧಿಸಲು, ತಮಗೆ ಅನುಸರಿಸಲು ಅಲ್ಲ’’ ಎನ್ನುವ ಹಾಡುಗಳು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವಂತಿತ್ತು. ‘‘ತಮ್ಮ ಎಲುಬಿನ ಮಂದಿರದೊಳು ಮಂದಿರವಿದೆ, ಇಗರ್ಜಿ, ಮಸೀದಿ, ದೇವಾಲಯವಿದೆ ಎಂಬ ಅರ್ಥಗರ್ಭಿತ ಹಾಡು - ಭಾವಪೂರ್ಣ ವರಸೆ - ಮುಚ್ಚಿದ ಕಣ್ಣು ಹಾಗೇ ಇದ್ದುಬಿಡಲಿ ಅನ್ನಿಸುವಂತಿತ್ತು.
ಗೆಲವು ಗೆಲವಲ್ಲ, ಗುರಿಯ ನಂತರ ಗುರಿಯಿಲ್ಲ, ಮನದ ಕತ್ತಲೊಳು ನಾವೇ ಬೆತ್ತಲಾದಾಗ ಇತ್ಯಾದಿ ಹಾಡು ಗಳೊಂದಿಗೆ ಕಾರ್ಯಕ್ರಮ ಮುಗಿದಾಗ ಇನ್ನೂ ಬೇಕು ಅನ್ನುವಂತಿತ್ತು. ರಮ್ಯಾ ಕೆ.ಜಿ, ಮೂರ್ನಾಡು, ಕುಶಾಲನಗರದ ವಿನೋದ್‍ಕುಮಾರ್ ಹಾಗೂ ಇಂದುಧರ್ ಕಾರ್ಯಕ್ರಮ ಆಯೋಜಿಸಿದ್ದರು.
ಮಾಹಿತಿ : ಕೃಪಾ. ದೇವರಾಜ್