ಕುಶಾಲನಗರ, ಜೂ. 6: ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸಿ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗÀಬೇಕು ಎಂದು ಸೋಮವಾರಪೇಟೆ ಜೆಎಂಎಫ್‍ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ದಿಂಡಿಲಕೊಪ್ಪ ಶಿವಪುತ್ರ ಕರೆ ನೀಡಿದರು.

ತಾಲೂಕು ಕಾನೂನು ಸೇವಾ ಪ್ರಾಧಿಕಾರ, ಸೋಮವಾರಪೇಟೆ ಅರಣ್ಯ ವಲಯಾರಣ್ಯಾಧಿಕಾರಿಯವರ ಕಚೇರಿ ವತಿಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಲಕ್ಷವೃಕ್ಷ ಆಂದೋಲನದಡಿ ಸಮೀಪದ ಚಿಕ್ಕ ಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದ ಜ್ಞಾನ ಕಾವೇರಿ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅರಣ್ಯ ಮತ್ತು ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕು. ಪರಿಸರವನ್ನು ನಿರ್ಲಕ್ಷಿಸಿದರೆ ಆತಂಕದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಪರಿಸರ ಜಾಗೃತಿ ಆಂದೋಲನದ ಪರಿಸರ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದ ರಾಜ್ಯ ವಿಜ್ಞಾನ ಪರಿಷತ್ತಿನ ಮಾಜಿ ಅಧ್ಯಕ್ಷ ಭಾರದ್ವಾಜ ಕೆ. ನಂದತೀರ್ಥ, ಕೊಡಗಿನಲ್ಲಿ ಹಸಿರು ಕಂಡರೂ ಅರಣ್ಯ ಹಾಗೂ ಜೀವ-ಸಂಕುಲ ಕ್ಷೀಣಿಸಿದೆ ಎಂದರು. ನೈಸರ್ಗಿಕ ಪರಿಸರಕ್ಕೆ ಯಾವದೇ ಧಕ್ಕೆಯನ್ನುಂಟು ಮಾಡದಿದ್ದರೆ ನಾವು ಸುರಕ್ಷಿತ ಬದುಕು ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಮಾತನಾಡಿ, ಪ್ರತಿಯೊಬ್ಬರೂ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿದಾಗ ಮಾತ್ರ ಪ್ರಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಎನ್. ಲಕ್ಷ್ಮಿಕಾಂತ್ ಮಾತನಾಡಿ, ಸೋಮವಾರಪೇಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ 1.5 ಲಕ್ಷ ಗಿಡ ನೆಟ್ಟು ಬೆಳೆಸುವ ಉದ್ದೇಶ ಹೊಂದಲಾಗಿದ್ದು, ಈ ಕಾರ್ಯಕ್ಕೆ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದರು.

ಪರಿಸರ ಜಾಗೃತಿ ಆಂದೋಲನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್, ಪ್ರತಿಯೊಬ್ಬರೂ ಪರಿಸರ ಕಾರ್ಯಕ್ರಮಗಳಿಗೆ ಸಹಕರಿಸಬೇಕು ಎಂದರು. ಪರಿಸರ ಸಂರಕ್ಷಣೆ ಕುರಿತು ತಹಶೀಲ್ದಾರ್ ಆರ್. ಗೋವಿಂದರಾಜು ಪ್ರತಿಜ್ಞಾ ವಿಧಿ ಬೋಧಿಸಿದರು. ವಕೀಲರ ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ, ತೊರೆನೂರು ಗ್ರಾ.ಪಂ. ಅಧ್ಯಕ್ಷ ದೇವರಾಜ್ ಮಾತನಾಡಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಫಿಲಿಪ್‍ವಾಸ್, ಶಿರಂಗಾಲ ಪಿಯು. ಕಾಲೇಜಿನ ಪ್ರಾಂಶುಪಾಲ ಹೆಚ್.ಜೆ. ನಾಗರಾಜ್, ತೊರೆನೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಕೃಷ್ಣೇಗೌಡ, ನಿರ್ದೇಶಕರಾದ ಟಿ.ಕೆ. ಪಾಂಡುರಂಗ, ಹೆಚ್.ಬಿ. ಚಂದ್ರಪ್ಪ, ಡಿ.ಆರ್.ಎಫ್.ಓ.ಗಳಾದ ಮಹದೇವ ನಾಯಕ್, ಚಂದ್ರೇಶ್, ಎಸ್.ಎಂ. ವಿಭೂತಿ, ಎನ್.ಎಲ್. ಚೇತನ್, ಬಸವನಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಬಿ.ಎನ್. ಸುನಿಲ್, ಶಿಕ್ಷಕರಾದ ಹೆಚ್.ಎಸ್. ಮಹೇಶ್, ಕೆ. ಮೂರ್ತಿ, ಎನ್.ಕೆ. ಮಾಲಾದೇವಿ, ಅರಣ್ಯ ಸಿಬ್ಬಂದಿ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. ಶಿಕ್ಷಕಿ ಎನ್.ಕೆ. ಮಾಲಾದೇವಿ ಪರಿಸರ ಗೀತೆ ಹಾಡಿದರು. ಅರಣ್ಯ ಸಿಬ್ಬಂದಿ ಪರಿಸರಕ್ಕೆ ಸಂಬಂಧಿಸಿದ ಪ್ರಚಾರ ಫಲಕಗಳನ್ನು ಹಿಡಿದು ಪರಿಸರ ಜಾಗೃತಿ ಮೂಡಿಸಿದರು.