ಪೊನ್ನಂಪೇಟೆ, ಜೂ. 6: ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ ರೋಗಿಗಳ ಕ್ಷೇಮಾಭಿವೃದ್ದಿ ಸಂಸ್ಥೆ(ಪಿ.ಐ.ಡಿ.ಪಿ.ಡಬ್ಲ್ಯು.ಎಸ್) ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸಹಯೋಗದಲ್ಲಿ ತಾ.7ರಂದು (ಇಂದು) ಮಡಿಕೇರಿಯಲ್ಲಿ ‘ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ ಕಾಯಿಲೆ’ (ಪಿ.ಐ.ಡಿ.) ಕುರಿತಂತೆ ‘ಮುಂದುವರಿದ ವೈದ್ಯಕೀಯ ಶಿಕ್ಷಣ’(ಸಿ.ಎಂ.ಇ.) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ ರೋಗಿಗಳ ಕ್ಷೇಮಾಭಿವೃದ್ದಿ ಸಂಸ್ಥೆಯ ಕಾರ್ಯದರ್ಶಿ ಎಂ.ಹೆಚ್. ರುಕ್ಸಾನ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು ಜಿಲ್ಲೆಯ ವೈದ್ಯರು, ಆರೋಗ್ಯ ಕಾರ್ಯಕರ್ತರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ರೋಗ ಸಂತ್ರಸ್ತರು, ಸಂತ್ರಸ್ತರ ಕುಟುಂಬದವರು ಸೇರಿದಂತೆ ಸಾರ್ವಜನಿಕರು ಮುಕ್ತವಾಗಿ ಭಾಗವಹಿಸಬಹುದಾದ ಈ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವು ಮಡಿಕೇರಿಯಲ್ಲಿರುವ ಕೊಡಗು ಅರೋಗ್ಯ ವಿಜ್ಞಾನ ಸಂಸ್ಥೆಯ (ಸರಕಾರಿ ಮೆಡಿಕಲ್ ಕಾಲೇಜು) ಸಭಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಇಮ್ಯುನೊಡಿಫೀಷಿಯೆನ್ಸಿ ರೋಗದ ಬಗ್ಗೆ ಮುಖ್ಯವಾಗಿ ವಿಷಯವನ್ನು ಕೇಂದ್ರೀಕರಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತೀರಾ ಅಪರೂಪವಾಗಿ ಮಕ್ಕಳನ್ನು ಬಾಧಿಸುವ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವದೇ ಇದರ ಮೂಲ ಉದ್ದೇಶವಾಗಿದೆ. ಇದೀಗ ಸರಕಾರದ ನೆರವಿನಲ್ಲಿ ರಾಜ್ಯಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ಮೊದಲ ಹಂತವಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಈ ಜಾಗೃತಿ ಮತ್ತು ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಅಯೋಜಿಸಲಾಗುತ್ತಿದೆ.
ತಜ್ಞ ವೈದ್ಯರನ್ನು ಕರೆಸಿ ಮಕ್ಕಳ ವೈದ್ಯರಿಗೆ, ವೈದ್ಯಕೀಯ ವಿದ್ಯಾರ್ಥಿಗಳಿಗೆ ಈ ಸಂಸ್ಥೆ ವತಿಯಿಂದ ಮುಂದುವರಿದ ವೈದ್ಯಕೀಯ ಶಿಕ್ಷಣವನ್ನು ನೀಡಲಾಗುತ್ತಿದೆ. ಇದರಿಂದ ಆರಂಭಿಕ ಹಂತದಲ್ಲೇ ರೋಗ ನಿರ್ಣಯ ಮಾಡಿ ಸಕಾಲದಲ್ಲಿ ಚಿಕಿತ್ಸೆ ನೀಡಲು ಹೆಚ್ಚು ಸಹಕಾರಿಯಾಗುತ್ತದೆ. ಅಲ್ಲದೆ ರೋಗಿಗಳು ನಿರಂತರವಾಗಿ ನರಳಾಡುವದನ್ನು ಇದರಿಂದ ತಪ್ಪಿಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ತಾ.7ರಂದು (ಇಂದು) ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿಧ ವಿಭಾಗದ ತಜ್ಞ ವೈದ್ಯರಾದ ಡಾ.ಸಾಗರ್ ಬಟ್ಟದ್, ಡಾ. ಹರ್ಷ ಪ್ರಸಾದ್, ಡಾ. ಗೀತಾ ಗೋವಿಂದರಾಜ್, ಡಾ.ಸ್ಟಾಲಿನ್ ರಾಂಪ್ರಕಾಶ್, ಡಾ. ವಿನೋದ್ ಸ್ಕೇರಿಯ, ಡಾ. ರಂಜೀತ್ ಅಜ್ಮಾನಿ ಸೇರಿದಂತೆ ವಿಷಯ ತಜ್ಞರಾದ ಮನೋಜ್ಕುಮಾರ್ ಮತ್ತಿತ್ತರರು ಕಾರ್ಯಕ್ರಮದಲ್ಲಿ ಈ ರೋಗದ ವಿವಿಧ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಿದ್ದಾರೆ ಎಂದು ರುಕ್ಸಾನ ಮಾಹಿತಿ ನೀಡಿದ್ದಾರೆ.