ವೀರಾಜಪೇಟೆ, ಜೂ. 6 : ವೀರಾಜಪೇಟೆ ವಿಭಾಗಕ್ಕೆ ನಿನ್ನೆ ಅಪರಾಹ್ನ 2-45 ಗಂಟೆಯಿಂದ ರಾತ್ರಿ 9ರ ತನಕ ಭಾರೀ ಗುಡುಗು ಮಿಂಚು ಗಾಳಿಯೊಂದಿಗೆ ಮಳೆ ಸುರಿದಿದ್ದು ಕೇವಲ ಆರು ಗಂಟೆ ಅವಧಿಯಲ್ಲಿ 3.02 ಇಂಚು ಮಳೆ ಸುರಿದಿದೆ.
ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಇಲ್ಲಿನ ಗೋಣಿಕೊಪ್ಪ ರಸ್ತೆಯ ಮಾಂಸ ಮಾರುಕಟ್ಟೆ ಬಳಿಯ ರಾಜಾ ಕಾಲುವೆಯಲ್ಲಿ ನೀರು ತುಂಬಿದ್ದು ಸೇತುವೆಯ ಮೇಲೆ ಸುಮಾರು ಒಂದೂವರೆ ಅಡಿಗಳಷ್ಟು ನೀರು ಹರಿಯುತ್ತಿದ್ದರೂ ಬಸ್ಸು, ಲಾರಿ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಸಂಚಾರಕ್ಕೆ ತೊಂದರೆಯಾಗಲಿಲ್ಲ.
ವೀರಾಜಪೇಟೆಯಲ್ಲಿ ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಅಪರಾಹ್ನ ನಿರೀಕ್ಷೆಗೂ ಮೀರಿ ಮಳೆ ಸುರಿದಿದೆ. ನಿನ್ನೆ ರಂಜಾನ್ ಹಬ್ಬದ ಸಂಭ್ರಮವಿದ್ದರೂ ಮಳೆ ಸುರಿದುದರಿಂದ ಅಡಚಣೆ ಉಂಟಾಗಲಿಲ್ಲ. ಕದನೂರು, ಪಾಲಂಗಾಲ, ತೋಮರ, ಕೆದಮುಳ್ಳೂರು, ಹೆಗ್ಗಳ, ಆರ್ಜಿ, ಪೆರುಂಬಾಡಿ ಹಾಗೂ ಸುತ್ತಮುತ್ತ¯ ಪ್ರದೇಶದಲ್ಲಿ ಮಳೆ ಸುರಿದಿದೆ.
ಬುಧವಾರ ಅಪರಾಹ್ನ ಸುರಿದ ಮಳೆಯಿಂದಾಗಿ ಇಲ್ಲಿನ ಮೂರ್ನಾಡು ರಸ್ತೆಯಿಂದ ಚರ್ಚ್ ರಸ್ತೆಗೆ ಹೋಗುವ ಅಡ್ಡ ರಸ್ತೆಯಲ್ಲಿ ಸಣ್ಣ ಮರ ಬಿದ್ದುದನ್ನು ಪಟ್ಟಣ ಪಂಚಾಯಿತಿ ನೌಕರರು ತೆರವುಗೊಳಿಸಿದರು.
ಭಾರೀ ಮಳೆ ಸುರಿದ ಪರಿಣಾಮವಾಗಿ ನಿನ್ನೆ ಅಪರಾಹ್ನ 4ಗಂಟೆಯಿಂದಲೇ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಉಂಟಾಗಿದೆ. ವೀರಾಜಪೇಟೆ ವಿಭಾಗದ ಕೆಲವು ಕಡೆಗಳಲ್ಲಿ ನಿನ್ನೆ ರಾತ್ರಿ ವಿದ್ಯುತ್ ಸಂಪರ್ಕವಿಲ್ಲದೆ ಕಾರ್ಗತ್ತಲು ಆವರಿಸಿತ್ತು ನಿವಾಸಿಗಳು ದೂರಿದ್ದಾರೆ.