ಸೋಮವಾರಪೇಟೆ, ಜೂ. 6: ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು ತಾ. 15 ರಂದು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಿದ್ದು, ಅರ್ಹ ವಿದ್ಯಾರ್ಥಿಗಳು ಪುಸ್ತಕಗಳನ್ನು ಪಡೆಯಬಹುದು ಎಂದು ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ತಾ. 15 ರಂದು ಸಂಜೆ 5 ಗಂಟೆಯಿಂದ ರವೀಂದ್ರ ಅವರ ಮನೆ ಆವರಣದಲ್ಲಿ ಪುಸ್ತಕ ವಿತರಿಸಲಾಗುವದು. ಬಡ ವಿದ್ಯಾರ್ಥಿಗಳು ಶಾಲೆಯಿಂದ ದೃಢೀಕರಣ ಪತ್ರ, ಬಿಪಿಎಲ್ ಪ್ರತಿಯೊಂದಿಗೆ ಪೋಷಕರನ್ನು ಕರೆತರಬೇಕು ಎಂದು ನಾಗರಾಜ್ ಹೇಳಿದರು.

ಇದರೊಂದಿಗೆ ತಾ. 20ರಂದು ರವೀಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ 5 ಮಂದಿ ವಿಶೇಷಚೇತನರಿಗೆ ಬಟ್ಟೆ ಮತ್ತು ತಲಾ 1 ಸಾವಿರ ಸಹಾಯಧನ ವಿತರಿಸಲಾಗುವದು ಎಂದರು. ಕಳೆದ 15 ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಪ್ರಯೋಜನ ಕಲ್ಪಿಸಬೇಕೆಂಬ ಉದ್ದೇಶದಿಂದ ಬಿಪಿಎಲ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ನಾಗರಾಜ್ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಾಜಪ್ಪ, ಹೆಚ್.ಓ. ಪ್ರಕಾಶ, ಉಪಾಧ್ಯಕ್ಷ ಕರ್ಕಳ್ಳಿ ರವಿ, ಸಂಚಾಲಕ ಎಲ್.ರವಿ, ಉಪಾಧ್ಯಕ್ಷ ಹೆಚ್.ಎನ್. ಮಣಿಕಂಠ ಅವರುಗಳು ಉಪಸ್ಥಿತರಿದ್ದರು.