ವೀರಾಜಪೇಟೆ, ಜೂ. 6: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಚುನಾವಣೆಯ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಇಲ್ಲಿನ ಸಿವಿಲ್ ಜಡ್ಜ್ ನ್ಯಾಯಾಲಯ ಪ್ರತಿವಾದಿ ಹಾಗೂ ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಭ್ಯರ್ಥಿ ಟಿ.ಎಂ.ಸುನೀತಾ ಅಲಿಯಾಸ್ ಜೂನ ಪರ ತೀರ್ಪು ನೀಡಿ ತಕರಾರು ವಿವಾದದ ವಾದಿ ಪಿ.ಎ.ಮಂಜುನಾಥ್ ಅವರ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸದೆ ವಜಾಗೊಳಿಸಿದೆ.
ಕಳೆದ ತಾ. 29-8-2018ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿಯ 18 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಪಟ್ಟಣ ಪಂಚಾಯಿತಿಯ ಹದಿನೈದನೇ ವಾರ್ಡ್ನಿಂದ ಜೆ.ಡಿ.ಎಸ್. ಪಕ್ಷದಿಂದ ಪಿ.ಎ.ಮಂಜುನಾಥ್ ಹಾಗೂ ಬಿಜೆಪಿ ಪಕ್ಷದಿಂದ ಟಿ.ಎಂ.ಸುನೀತಾ ಸ್ಪರ್ಧಿಸಿದ್ದರು.
ಚುನಾವಣೆಯಲ್ಲಿ ಮಂಜುನಾಥ್ ಒಟ್ಟು 389 ಮತ ಗಳಿಸಿ ಸೋಲನ್ನು ಅನುಭವಿಸಿದರೆ, ಸುನೀತಾ ಅವರು 393 ಮತಗಳನ್ನು ಪಡೆದು 4ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು. ಇಲ್ಲಿನ ಗಾಂಧಿನಗರ ಕ್ಷೇತ್ರದಲ್ಲಿರುವ ಕೆಲವು ಮತದಾರರ ಹೆಸರು ಮೂರು ಹಾಗೂ ನಾಲ್ಕನೇ ವಾರ್ಡ್ಗಳ ಮತದಾರರ ಪಟ್ಟಿಯಲ್ಲಿದ್ದು ಇವರುಗಳು ಎರಡು ಕಡೆಗಳಲ್ಲಿ ಮತದಾನ ಮಾಡುವ ಅವಕಾಶವಿದ್ದುದರಿಂದ ಸುನೀತಾ ಅವರು 4ಮತಗಳ ಅಂತರದಲ್ಲಿ ಗೆಲ್ಲಲು ಕಾರಣವಾಗಿದೆ. ಮತದಾರರ ಪಟ್ಟಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ಸುನೀತಾ ಅವರ ಗೆಲುವನ್ನು ಅನೂರ್ಜಿತಗೊಳಿಸುವಂತೆ ನ್ಯಾಯಾಲಯದ ಮುಂದೆ ಮಂಜುನಾಥ್ ಅವರು ತಾ: 3-11-2018ರಂದು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ದಾವೆಯ ವಾದಿಯಾದ ಮಂಜುನಾಥ್ ಅವರು ಚುನಾವಣೆ ಕಳೆದು 30ದಿನಗಳೊಳಗೆ ತಕರಾರು ಅರ್ಜಿ ಸಲ್ಲಿಸಬೇಕಾಗಿತ್ತು. ಆದರೆ 3ದಿನ ವಿಳಂಬವಾಗಿ ತಕರಾರು ಅರ್ಜಿ ಸಲ್ಲಿಸಿದ್ದರಿಂದ ತಕರಾರು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಪ್ರತಿವಾದಿ ಸುನೀತಾಳ ಪರ ವಾದಿಸಿದ ವಕೀಲರು ಚುನಾವಣಾ ತಕರಾರನ್ನು 30ದಿನಗಳೊಳಗೆ ಸಲ್ಲಿಸಬೇಕೆಂಬ ಕಾನೂನಿನ ನಿಯಮವಿದ್ದರೂ ಅದನ್ನು ವಾದಿ ಉಲ್ಲಂಘಿಸಿದ್ದಾರೆ. ಇಂತಹದೇ ಪ್ರಕರಣದಲ್ಲಿ ತಮಿಳ್ನಾಡಿನ ಚುನಾವಣಾ ತಕರಾರು ವಿವಾದಕ್ಕೆ ಸುಪ್ರೀಂಕೋರ್ಟ್ ತಕರಾರನ್ನು ವಿಳಂಬವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದಕ್ಕೆ ತಕರಾರು ಅರ್ಜಿಯನ್ನು ವಜಾಗೊಳಿಸಿದ ಆದೇಶದ ಪ್ರತಿಯನ್ನು ನ್ಯಾಯಾಲಯದ ಮುಂದೆ ಮಂಡಿಸಿರುವದನ್ನು ಉಲ್ಲೇಖಿಸಿ ನ್ಯಾಯಾಧಿüೀಶರು ಚುನಾವಣಾ ತಕರಾರು ವಿವಾದವನ್ನು ವಿಚಾರಣೆಗೆ ಸ್ವೀಕರಿಸದೆ ಈ ತೀರ್ಪು ನೀಡಿದ್ದಾರೆ. ಪ್ರತಿವಾದಿ ಸುನೀತಾಳ ಪರ ಬಿ.ಆರ್.ರತ್ನಾಕರ ಶೆಟ್ಟಿ ವಾದಿಸಿದರು.
ಅತಂತ್ರ ಸ್ಥಿತಿ
ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು 9ತಿಂಗಳಾದರೂ ಈ ತನಕ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯನ್ನು ಸರಕಾರ ಪ್ರಕಟಿಸಿಲ್ಲ. ಎರಡು ಪದವಿಗಳ ಸ್ಥಾನ ನೆನೆಗುದಿಗೆ ಬಿದ್ದಿದ್ದು ಇನ್ನು ಅತಂತ್ರ ಸ್ಥಿತಿಯಲ್ಲಿ ಮುಂದುವರೆದಿದೆ.