ಕೂಡಿಗೆ, ಜೂ. 6 : ದಿಡ್ಡಳ್ಳಿ ನಿರಾಶ್ರಿತರಿಗೆ ಕೂಡಿಗೆ ಗ್ರಾಮ ಪಂಚಾಯ್ತಿಯ ಬ್ಯಾಡಗೊಟ್ಟದಲ್ಲಿ ಕಲ್ಪಿಸಲಾಗಿರುವ ಪುನರ್ವಸತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ದಿಢೀರ್ ಭೇಟಿ ನೀಡಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಮನೆಗಳ ನಿರ್ಮಾಣ ಮತ್ತು ತಾತ್ಕಾಲಿಕ ಶೆಡ್‍ಗಳನ್ನು ತೆರವುಗೊಳಿಸಿ ಆ ಸ್ಥಳಗಳಲ್ಲಿ ಮನೆ ನಿರ್ಮಾಣ ಮಾಡಬೇಕು. ಒಳಚರಂಡಿ ವ್ಯವಸ್ಥೆ ಸರಿಪಡಿಸಬೇಕು ಮತ್ತು ತಾತ್ಕಾಲಿಕ ಶೌಚಾಲಯ ಗುಂಡಿಗಳು ತುಂಬಿ ದುರ್ನಾತ ಬರುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ವಿದ್ಯುತ್‍ಚ್ಛಕ್ತಿ ಮತ್ತು ಚರಂಡಿ ವ್ಯವಸ್ಥೆಗಳು ಆಗದೆ ಮಳೆಯ ನೀರು ಮತ್ತು ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ತಾತ್ಕಾಲಿಕ ಶೆಡ್‍ಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಭೂ ಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಆದಿವಾಸಿಗಳಿಗೆ ಬ್ಯಾಡಗೊಟ್ಟದಲ್ಲಿ ಸ್ಮಶಾನ ಜಾಗವನ್ನು ಗುರುತಿಸುವಂತೆ ಜಿಲ್ಲಾ ಭೂ ದಾಖಲೆ ಅಧಿಕಾರಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, ಪುನರ್ವಸತಿ ಕೇಂದ್ರಕ್ಕೆ ಸರ್ಕಾರದಿಂದ ಕಾಮಗಾರಿಗೆ ಸ್ವಲ್ಪ ಪ್ರಮಾಣದ ಹಣ ಬರಬೇಕಾಗಿದೆ. ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಕೇಂದ್ರದ ನಿವಾಸಿಗಳಿಗೆ ಈಗಾಗಲೇ ಸೌಕರ್ಯವನ್ನು ಒದಗಿಸಿಕೊಡಲು ಕಾರ್ಯೋನ್ಮುಖ ರಾಗಿದ್ದೇವೆ. ಬ್ಯಾಡಗೊಟ್ಟದ ಎರಡನೇ ಬಡಾವಣೆಯ ಕಾಮಗಾರಿಯು ಚುರುಕಿನಿಂದ ನಡೆಯುತ್ತಿದ್ದು; ಇನ್ನು 15 ದಿನದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ದಿಡ್ಡಳ್ಳಿ ನಿರಾಶ್ರಿತ ಫಲಾನುಭವಿಗಳಿಗೆ ಹಸ್ತಾಂತರಿಸ ಲಾಗುವದು. ಮಳೆಗಾಲ ಪ್ರಾರಂಭವಾಗುವ ಮುಂಚಿತವಾಗಿ ಅತಿಮುಖ್ಯವಾಗಿ ಆಗಬೇಕಾಗಿರುವ ಒಳಚರಂಡಿ ಮತ್ತು ಶೌಚಾಲಯದ ವ್ಯವಸ್ಥೆಗಳನ್ನು ಕ್ರಮಬದ್ಧವಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಈ ಸಂದರ್ಭ ಉಪ ವಿಭಾಗಾಧಿಕಾರಿ ಜವರೇಗೌಡ, ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಸಚಿನ್, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶೇಖರ್, ಕಂದಾಯ ನಿರೀಕ್ಷಕ ಮಧು ಸೇರಿದಂತೆ ಅಧಿಕಾರಿಗಳು ಇದ್ದರು.