ಮಡಿಕೇರಿ, ಜೂ. 6: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್‍ಕ್ರಾಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾ. 1 ರಂದು ವೈದ್ಯಕೀಯ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್‍ಕುಮಾರ್ ಮಾತನಾಡಿ, ಹನಿಹನಿ ಕೂಡಿದರೆ ಹಳ್ಳವೆಂಬಂತೆ ಪ್ರಕೃತಿಯನ್ನು ಉಳಿಸುವಲ್ಲಿ ನಾವು ಮಾಡುವ ಸಣ್ಣ ಕಾರ್ಯವೇ ದೊಡ್ಡದಾಗಿ ಪರಿವರ್ತನೆಗೊಂಡು ಯಶಸ್ವಿಯಾಗುತ್ತದೆ ಎಂದರು. ಮಡಿಕೇರಿ, ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ರವೀಂದ್ರ ರೈ ಮಾತನಾಡಿ, ಪರಿಸರ ರಕ್ಷಣೆ ಎಂದರೆ ಕೇವಲ ಗಿಡವನ್ನು ನೆಡುವದು ಮಾತ್ರವಲ್ಲದೆ, ಹೆಚ್ಚಿನ ಕಾಳಜಿ ವಹಿಸುತ್ತಿರಬೇಕೆಂದು ತಿಳಿಸಿದರು.

ಮಡಿಕೇರಿ, ಯೂತ್ ರೆಡ್ ಕ್ರಾಸ್‍ನ ಅಧ್ಯಕ್ಷ ಧನಂಜಯ್ ಮಾತನಾಡಿ ಮಕ್ಕಳಂತೆ ಸಸಿಗಳನ್ನು ಕೂಡ ಸಾಕುತ್ತಿರುವ ಸಾಲು ಮರದ ತಿಮ್ಮಕ್ಕ ಪರಿಸರ ಸಂರಕ್ಷಣೆಗೆ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್‍ಕ್ರಾಸ್‍ನ ಉಪಾಧ್ಯಕ್ಷ ಚಂದನಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಗಾಯನ ಹಾಡಿ ಕಾಲೇಜಿನ ಆವರಣವನ್ನು ಶುಚಿಗೊಳಿಸಲಾಯಿತು ನಂತರ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮಕ್ಕೆ ಎಚ್‍ಡಿಎಫ್‍ಸಿ ಬ್ಯಾಂಕ್ ಮಡಿಕೇರಿ ಶಾಖೆ ವತಿಯಿಂದ ಬ್ಯಾಂಕಿನ ವ್ಯವಸ್ಥಾಪಕ ಅಶೋಕ್ 40 ಡಸ್ಟ್ ಬಿನ್ ಮತ್ತು 250 ಟೀ ಶರ್ಟ್‍ಗಳನ್ನು ಸಂಸ್ಥೆಗೆ ಒದಗಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಧ್ಯಾಪಕರು, ಬೋಧಕ ಮತ್ತು ಬೋಧಕೇತರ ವೃಂದದವರು, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಡಾ. ವೀಣಾ, ಮತ್ತು ಘಟಕದ ಸ್ವಯಂ ಸೇವಕರು, ಎಂಬಿಬಿಎಸ್ ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು. ರಾಘವೇಂದ್ರ ನಿರೂಪಿಸಿ, ಅನುಶ್ರೀ ವಂದಿಸಿದರು.