ಶನಿವಾರಸಂತೆ, ಜೂ. 5: ಸಮೀಪದ ಗೋಪಾಲಪುರ ಗ್ರಾಮದ ಸಂತ ಅಂತೋಣಿ ಚರ್ಚ್‍ನ ನೂತನ ಧರ್ಮಗುರು ಜೇಕಬ್ ಕೊಲ್ಲನೂರ್ ಭಾನುವಾರ ಅಧಿಕಾರ ಸ್ವೀಕರಿಸಿದರು. ಚರ್ಚ್‍ನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಹಿಂದಿನ ಧರ್ಮಗುರು ಡೇವಿಡ್ ಸಗಾಯ್‍ರಾಜ್ ವೀರಾಜಪೇಟೆ ಚರ್ಚ್‍ನಿಂದ ವರ್ಗಾವಣೆಗೊಂಡು ಆಗಮಿಸಿದ ಜೇಕಬ್ ಕೊಲ್ಲನೂರ್ ಅವರಿಗೆ ದಾಖಲಾತಿ ಪತ್ರಗಳೊಂದಿಗೆ ಕೀಯನ್ನು ಹಸ್ತಾಂತರಿಸಿ ಸ್ವಾಗತಿಸಿದರು. ನಂತರ ವಿಶೇಷ ಪ್ರಾರ್ಥನೆಯೊಂದಿಗೆ ಪೂಜಾ ಕಾರ್ಯಗಳು ನೆರವೇರಿದವು. ನೂತನ ಧರ್ಮಗುರು ಜೇಕಬ್ ಕೊಲ್ಲನೂರ್ ಅವರನ್ನು ಸಮುದಾಯದವರು ಗೌರವಿಸಿದರು. ಗೋಪಾಲಪುರ, ಒಡೆಯನಪುರ, ಬೀಟಿಕಟ್ಟೆ, ಗೌಡಳ್ಳಿ, ಶನಿವಾರಸಂತೆ, ಕೊಡ್ಲಿಪೇಟೆ ಮೊದಲಾದ ಗ್ರಾಮಗಳಿಂದ ಬಂದಿದ್ದ ಕ್ರೈಸ್ತ ಸಮುದಾಯದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಮಡಿಕೇರಿ ಚರ್ಚ್‍ನ ಧರ್ಮಗುರು ಮೆಂಡೊನಾ, ಚಿಕ್ಕಮಗಳೂರು ಚರ್ಚ್ ಧರ್ಮಗುರು ಸುಪ್ರೀತ್ ಮೆನೇಜಸ್ ಹಾಗೂ ಸಮುದಾಯದ ಹಿರಿಯ ಮುಖಂಡರು ಉಪಸ್ಥಿತರಿದ್ದರು. ಡೇವಿಡ್ ಸಗಾಯ್ ರಾಜ್ ಅವರು ಪೊನ್ನಂಪೇಟೆ ಚರ್ಚ್‍ನ ನೂತನ ಧರ್ಮಗುರುವಾಗಿ ವರ್ಗಾವಣೆಗೊಂಡಿದ್ದಾರೆ.