ಮಡಿಕೇರಿ, ಜೂ. 3: ಮಡಿಕೇರಿ ನಗರದ ವಿವಿಧ ಕೊಡವಕೇರಿಗಳಲ್ಲಿ ಒಂದಾಗಿರುವ ವಿನಾಯಕ ಕೊಡವಕೇರಿ ಸಂಘದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಗರದ ಕೊಡವ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಚೊಟ್ಟೆರ ಅಪ್ಪಾಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು. ಜನಾಂಗದ ಸಂಪ್ರದಾಯದ ಪಾಲನೆ, ಒಗ್ಗಟ್ಟು ಪರಸ್ಪರ ಸಹಕಾರದ, ಅಗತ್ಯದ ಬಗ್ಗೆ ಅಧ್ಯಕ್ಷ ಅಪ್ಪಾಜಿ ಅವರು ಮಾತನಾಡಿದರು. ಅಮ್ಮತ್ತಿ ಕೊಡವ ಸಮಾಜವು ಗಂಗಾಪೂಜೆ ಸಂದರ್ಭ ಮದ್ಯಬಳಕೆ ನಿಷೇಧ ಮಾಡಿರುವ ಕ್ರಮಕ್ಕೆ ಸಹಕಾರ ನೀಡಲು ತೀರ್ಮಾನಿಸಲಾಯಿತು.
ನೆರವಂಡ ಅನಿತಾಪೂವಯ್ಯ ಪ್ರಾರ್ಥಿಸಿ, ಕಾರ್ಯದರ್ಶಿ ಬಲ್ಯಂಡ ಕೆ. ನಂಜಪ್ಪ ವರದಿ ನೀಡಿದರು. ನಿರ್ದೇಶಕ ಕುಡುವಂಡ ಉತ್ತಪ್ಪ ಲೆಕ್ಕಪತ್ರ ಮಂಡಿಸಿದರು. ನೆರವಂಡ ಶ್ಯಾಂಚರ್ಮಣ ಆಡಳಿತ ಮಂಡಳಿ ವರದಿ ನೀಡಿದರು. ಈ ಸಂದರ್ಭ 10ನೇ ತರಗತಿಯಲ್ಲಿ ಉತ್ತಮ ಸಾಧನೆ ತೋರಿದ ಅಚ್ಚಪಂಡ ಗೆಲಿನ್ ದೇವಮ್ಮಳನ್ನು ಪುರಷ್ಕರಿಸಲಾಯಿತು. ಅಪ್ಪಾಜಿ ಸ್ವಾಗತಿಸಿ, ಬಲ್ಯಂಡ ನಂಜಪ್ಪ ವಂದಿಸಿದರು.