ಮಡಿಕೇರಿ, ಜೂ. 3: 2019-20ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗಳು ಪ್ರಾರಂಭವಾಗಿರುವದರಿಂದ, ವಿದ್ಯಾರ್ಥಿಗಳಿಗೆ ಬಸ್‍ಪಾಸ್ ವಿತರಿಸುವಂತೆ ವಿವಿಧ ಶಿಕ್ಷಣ ಸಂಸ್ಥೆಗಳಿಂದ ಮನವಿಗಳನ್ನು ಸ್ವೀಕರಿಸಲಾಗುತ್ತಿದೆ. ಅದೇ ರೀತಿಯಾಗಿ ಪದವಿಪೂರ್ವ ಕಾಲೇಜುಗಳು ಮೇ 20ರಿಂದ ಪುನರಾರಂಭಗೊಂಡಿರುವದರಿಂದ ಬಸ್‍ಪಾಸ್ ವಿತರಿಸುವಂತೆ ನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆಯಿಂದಲೂ ಮನವಿ ಬಂದಿರುತ್ತದೆ.
ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಅನುಕೂಲವಾಗುವಂತೆ, ಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳು, 2018-19ನೇ ಸಾಲಿನಲ್ಲಿ ವಿತರಣೆಯಾಗಿರುವ ವಿದ್ಯಾರ್ಥಿ ಪಾಸುಗಳನ್ನು ತೋರಿಸಿ, ತಾ. 30ರ ವರೆಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು 2018-19ನೇ ಸಾಲಿನ ವಿದ್ಯಾರ್ಥಿ ಪಾಸಿನ ಜೊತೆಗೆ ಪ್ರಸಕ್ತ ಸಾಲಿನ ಬೋಧನಾ ಶುಲ್ಕ ರಶೀದಿ ಅಥವಾ ಶಾಲಾ, ಕಾಲೇಜಿನ ಗುರುತಿನ ಚೀಟಿಯನ್ನು ತೋರಿಸಿ ಪಾಸಿನಲ್ಲಿ ನಮೂದಿಸಿರುವ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿ ಕ.ರಾ.ರ.ಸಾ.ನಿಗಮ ಕೇಂದ್ರ ಕಚೇರಿ ಆದೇಶ ಹೊರಡಿಸಿದೆ.