ಕುಶಾಲನಗರ, ಜೂ. 4: ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19ನೇ ಸಾಲಿನಲ್ಲಿ 1 ಕೋಟಿ 3 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು ಕಳೆದ ಸಾಲಿನಲ್ಲಿ ರೂ. 1.05 ಕೋಟಿ ಲಾಭ ಗಳಿಸಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ 138.91 ಕೋಟಿ ವ್ಯವಹಾರ ನಡೆಸಿ 1.03 ಕೋಟಿ ಲಾಭ ಗಳಿಸಿದ್ದು ದ್ವಿತೀಯ ಬಾರಿಗೆ ಕೋಟಿ ರೂ.ಗಳ ಲಾಭ ಪಡೆದುಕೊಂಡು ಹೊಸ ಇತಿಹಾಸ ನಿರ್ಮಾಣ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

1921 ರಲ್ಲಿ ಪ್ರಾರಂಭಗೊಂಡ ಸಂಘ ಶತಮಾನದ ಹೊಸ್ತಿಲಲ್ಲಿದ್ದು ಶತಮಾನೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ಚಿಂತನೆ ಹರಿಸಿದೆ. ಮಹಾಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವದು. ಸಂಘ 1 ಎಕರೆ ಜಾಗ ಖರೀದಿಸಿ ಶತಮಾನೋತ್ಸವ ಭವನ ನಿರ್ಮಾಣ ಮಾಡಲು ಚಿಂತನೆ ಹರಿಸಿದೆ ಎಂದರು.

ಸಂಘ ಕೇವಲ ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗದೆ ಬಡವರು, ಕೂಲಿ ಕಾರ್ಮಿಕರು, ರೈತಾಪಿ ವರ್ಗದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರೊಂದಿಗೆ ಸಂಘವು ಸತತವಾಗಿ ಕಳೆದ 25 ವರ್ಷಗಳಿಂದ ಲಾಭದಲ್ಲಿ ಮುನ್ನಡೆಯುತ್ತಿದ್ದು ಸದಸ್ಯರಿಗೆ ಕಳೆದ 7 ವರ್ಷಗಳಿಂದ ಶೇ 25 ರಷ್ಟು ಡಿವಿಡೆಂಡ್ ವಿತರಿಸುತ್ತಾ ಬಂದಿದೆ ಎಂದು ಮಾಹಿತಿ ನೀಡಿದರು.

ಸಂಘ ಕಳೆದ ಸಾಲಿನಲ್ಲಿ 3047 ಸದಸ್ಯರಿಂದ ರೂ. 184.63 ಲಕ್ಷಗಳ ಪಾಲು ಹಣ ಸಂಗ್ರಹಿಸಿದ್ದು ಪ್ರಸಕ್ತ 3346 ಸದಸ್ಯರನ್ನು ಹೊಂದುವ ಮೂಲಕ ರೂ. 236.04 ಲಕ್ಷ ರುಗಳ ಪಾಲು ಹಣ ಸಂಗ್ರಹಿಸಿ ಕಳೆದ ಬಾರಿಗಿಂತ ರೂ. 51.41 ಲಕ್ಷ ಹೆಚ್ಚಿನ ಮೊತ್ತ ಸಂಗ್ರಹಿಸಿ ದುಡಿಯುವ ಬಂಡವಾಳವಾಗಿ ಕ್ರೋಢೀಕರಿಸಿದೆ. ಕಳೆದ ಸಾಲಿನಲ್ಲಿ ವಿವಿಧ ಠೇವಣಿಗಳ ರೂಪದಲ್ಲಿ 2793.75 ಲಕ್ಷ ಸ್ವೀಕರಿಸಿದ್ದು ಪ್ರಸಕ್ತ ರು 3043.78 ಲಕ್ಷ ಸಂಗ್ರಹಿಸಿ ಕಳೆದ ಸಾಲಿಗಿಂತ 250.03 ಲಕ್ಷ ರೂ. ಅಧಿಕ ಠೇವಣಿ ಸಂಗ್ರಹಿಸಿದೆ. ಸಂಘದ ಸದಸ್ಯರಿಗೆ ವಿವಿಧ ರೂಪಗಳ ಸಾಲ ವಿತರಣೆ ಮಾಡಲಾಗಿದ್ದು ರೈತರ ಸಾಲ ಮನ್ನಾ ಯೋಜನೆಯಡಿ ಸಂಘಕ್ಕೆ ಸರಕಾರದಿಂದ 36 ಲಕ್ಷ ರೂ.ಗಳ ಬಾಕಿಯಿದೆ ಎಂದು ಅವರು ತಿಳಿಸಿದರು. ಮಾರುಕಟ್ಟೆ ರಸ್ತೆಯಲ್ಲಿ ಸುಸಜ್ಜಿತ ಕಟ್ಟಡ ಒಳಗೊಂಡಿದ್ದು ನೂತನ ಕಟ್ಟಡದ ಸಭಾಂಗಣ, ಹಳೆಯ ಕಟ್ಟಡ ಒಳಗೊಂಡಂತೆ ಬಾಡಿಗೆ ರೂಪ ದಲ್ಲಿ ವಾರ್ಷಿಕ 20 ಲಕ್ಷ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ ಎಂದರು.

ಮಹಾಸಭೆ

ಸಂಘದ ವಾರ್ಷಿಕ ಮಹಾಸಭೆ ತಾ. 9 ರಂದು ಮಾರುಕಟ್ಟೆ ರಸ್ತೆಯ ಸಂಘದ ನೂತನ ಕಟ್ಟಡದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ತೋರಿದ ಕ್ರೀಡಾಪಟುಗಳಿಗೆ ಬಹುಮಾನ ವಿತರಣೆ, ಬಡತನ ರೇಖೆಯಲ್ಲಿರುವ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವದು ಎಂದು ಅವರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಕಾರ್ತೀಶನ್, ನಿರ್ದೇಶಕರುಗಳಾದ ಕವಿತಾ ಮೋಹನ್, ನೇತ್ರಾವತಿ, ಕೆ.ಎನ್. ಅಶೋಕ್, ಪಿ.ಬಿ. ಯತೀಶ್, ಎಂ.ಕೆ. ಗಣೇಶ್, ಚಿಲ್ಲನ ಗಣಿಪ್ರಸಾದ್, ಸಲಹಾ ಸಮಿತಿಯ ಕೆ.ಪಿ.ಚಂದ್ರಕಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಇದ್ದರು.