ಸೋಮವಾರಪೇಟೆ, ಜೂ.3: ದಕ್ಷಿಣ ಭಾರತದ ಪ್ರವಾಸ ಕೈಗೊಂಡಿದ್ದ ಬೆಳಗಾಂನ ಮಂದಿ ಸಂಚರಿಸುತ್ತಿದ್ದ ಮಹೇಂದ್ರ ಕ್ರೂಸರ್ (ಕೆ.ಎ.24-6738) ವಾಹನ ಪಟ್ಟಣ ಸಮೀಪದ ಕೋವರ್‍ಕೊಲ್ಲಿ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಸ್ಥಳದಲ್ಲೇ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಕಳೆದ ಮೇ 24ರಂದು ಬೆಳಗಾಂನಿಂದ ಹೊರಟು ತಮಿಳುನಾಡು, ಶ್ರೀಶೈಲ, ರಾಮೇಶ್ವರ, ಕನ್ಯಾಕುಮಾರಿ ಪ್ರವಾಸ ಮುಗಿಸಿ, ಜೂ.1ರಂದು ಮೈಸೂರಿಗೆ ಆಗಮಿಸಿ, ಸುತ್ತೂರು ಮಠದಿಂದ ನಿನ್ನೆ ಮಧ್ಯಾಹ್ನ 3 ಗಂಟೆಗೆ ಹೊರಟು ಕುಶಾಲನಗರ- ಸೋಮವಾರಪೇಟೆ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.ಕೋವರ್‍ಕೊಲ್ಲಿ ಬಳಿ ಚಾಲಕನ ನಿಯಂತ್ರಣ ತಪ್ಪಿ ತೋಟದೊಳಗೆ ವಾಹನ ಪಲ್ಟಿಯಾದ ಹಿನ್ನೆಲೆ ಬೆಳಗಾಂನ ಹುಕ್ಕೇರಿ ತಾಲೂಕು, ಗೋಟೂರು ನಿವಾಸಿ ಸೋಮಯ್ಯ ಅವರ ಪುತ್ರ, ಕಲಬುರ್ಗಿ ರುದ್ರಮುನೀಶ್ವರ ಮಠದ ವಿದ್ಯಾರ್ಥಿ ಗುರುಸಿದ್ದಪ್ಪ (ಕಾರ್ತಿಕ್-9) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದರೊಂದಿಗೆ ವಾಹನ ಚಾಲಿಸುತ್ತಿದ್ದ ಚಾಲಕ ವಿರೂಪಾಕ್ಷ ಹಿರೇಮಠ ಸೇರಿದಂತೆ 16ಮಂದಿಗೆ ತೀವ್ರ ಗಾಯಗಳಾಗಿವೆ.

ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದ ಸಿದ್ದವ್ವ ಸೇರಿದಂತೆ ಮತ್ತೋರ್ವರನ್ನು ಮಡಿಕೇರಿಯಿಂದ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದವರಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆ, ಸುಳ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅವಘಡ ನಡೆದ ತಕ್ಷಣ ಟಾಟಾ ಕಾಫಿ ಸಂಸ್ಥೆಯ ಸಿಬ್ಬಂದಿ, ಕಾರ್ಮಿಕರು ಮತ್ತು ಸಾರ್ವಜನಿಕರು ಸ್ಥಳಕ್ಕಾಗಮಿಸಿ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಠಾಣಾಧಿಕಾರಿ ಶಿವಶಂಕರ್, ವೃತ್ತ ನಿರೀಕ್ಷಕ ನಂಜುಂಡೇಗೌಡ, ಪ್ರೊಬೇಷನರಿ ಎಸ್.ಐ. ಮೋಹನ್‍ರಾಜ್ ಅವರುಗಳು ಪರಿಶೀಲನೆ ನಡೆಸಿ, ಸುಮಾರು 6 ಮಂದಿ ಗಾಯಾಳುಗಳನ್ನು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರು.

ಮಹೇಂದ್ರ ಕ್ರೂಸರ್ ವಾಹನದಲ್ಲಿ ಒಟ್ಟು 18 ಮಂದಿ ಸಂಚರಿಸುತ್ತಿದ್ದು, ಇವರಲ್ಲಿ 8 ಮಕ್ಕಳು ಇದ್ದರು. ಬಹುತೇಕ ಎಲ್ಲರಿಗೂ ತೀವ್ರಗಾಯ ಗಳಾಗಿದ್ದರೆ 8 ತಿಂಗಳ ಹಸುಗೂಸು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ.

ಗಾಯಾಳುಗಳಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಗಳು ತುರ್ತು ಸ್ಪಂದಿಸಿ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದರು. ತೀವ್ರವಾಗಿ ಗಾಯಗೊಂಡವರನ್ನು ಮಡಿಕೇರಿಯಿಂದ ಆಂಬ್ಯುಲೆನ್ಸ್ ತರಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.

ತಪ್ಪಿದ ಭಾರೀ ದುರಂತ: ಕೋವರ್‍ಕೊಲ್ಲಿ ಬಳಿ ಅವಘಡಕ್ಕೀಡಾದ ಕ್ರೂಸರ್ ವಾಹನದಲ್ಲಿ

(ಮೊದಲ ಪುಟದಿಂದ) ಗ್ಯಾಸ್ ಸಿಲಿಂಡರ್, ಸ್ಟೌಟ್ ಸಹ ಇತ್ತು. ಇದರೊಂದಿಗೆ ಟಾಟಾ ಕಾಫಿ ಸಂಸ್ಥೆಗೆ ಸೇರಿದ ತೋಟಕ್ಕೆ ಸೋಲಾರ್ ಬೇಲಿ ಅಳವಡಿಸಲಾಗಿತ್ತು. ವಿದ್ಯುತ್ ವಯರ್‍ಗಳು ಇಲ್ಲಿ ಹಾದುಹೋಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸಲಿಲ್ಲ. ವಿದ್ಯುತ್ ಅಥವಾ ಸೋಲಾರ್ ತಂತಿಯಿಂದ ಬೆಂಕಿ ಹೊತ್ತಿಕೊಂಡಿದ್ದರೆ, ಸಿಲಿಂಡರ್ ಸ್ಪೋಟಗೊಂಡಿದ್ದರೆ ಭಾರೀ ಪ್ರಮಾಣದ ಅನಾಹುತ ಸಂಭವಿಸುತಿತ್ತು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.