ಮಡಿಕೇರಿ, ಜೂ. 4: ಮುಂಗಾರು ಕೃಷಿ ಚಟುವಟಿಕೆಯಲ್ಲಿ ರೈತರು ತೊಡಗುವದರೊಂದಿಗೆ ಗದ್ದೆಗಳನ್ನು ಉಳುಮೆಯಲ್ಲಿ ಕಾಯಕ ನಿರತರಾಗಿದ್ದಾರೆ. ಗ್ರಾಮೀಣ ಪ್ರದೇಶ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಭತ್ತದ ಅಗಡಿಗಳನ್ನು ಹದಗೊಳಿಸಿ ಭತ್ತ ಬೀಜಗಳ ಬಿತ್ತನೆಯಲ್ಲಿ ತೊಡಗಿದ್ದಾರೆ.
ಪ್ರಸಕ್ತ ಕೃಷಿ ಚಟುವಟಿಕೆಗೆ ನಿರೀಕ್ಷಿತ ಮುಂಗಾರು ಮಳೆ ಆರಂಭಿಕವಾಗಿ ಲಭಿಸಿಲ್ಲ ಎನ್ನುವದು ಉತ್ತರ ಕೊಡಗಿನ ಗ್ರಾಮೀಣ ರೈತರ ಆತಂಕವಾಗಿದೆ. ಹೀಗಾಗಿ ಮೇ 2ನೇ ವಾರದಲ್ಲಿ ವಾಡಿಕೆಯಂತೆ ಬಿತ್ತನೆ ಮಾಡುತ್ತಿದ್ದವರು, ಪ್ರಸಕ್ತ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನೊಂದೆಡೆ ಗಾಳಿಬೀಡು, ಮಕ್ಕಂದೂರು, ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕೆಲವು ಗದ್ದೆಗಳಲ್ಲಿ ಕಳೆದ ಪ್ರಾಕೃತಿಕ ವಿಕೋಪದಿಂದ ಮಣ್ಣು ತುಂಬಿರುವ ಪರಿಣಾಮ, ಈ ಬಾರಿ ರೈತರು ಕೃಷಿಗೆ ಮುಂದಾಗಿಲ್ಲ. ಮಾತ್ರವಲ್ಲದೆ ಕಳೆದ ಮಳೆಗಾಲದ ತೀವ್ರತೆಯಿಂದ ಕಂಗೆಟ್ಟಿರುವ ಅನೇಕರು ಈ ವರ್ಷ ಮಳೆಗಾಲ ನೋಡಿ ಕೊಂಡು ಮುಂದೆ ಕಾಯಕ ಆರಂಭಿ ಸುವ ದಿಸೆಯಲ್ಲಿ ಚಿಂತಿಸುತ್ತಿದ್ದಾರೆ.
ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮವಾದ ಮಳೆ ಬಿದ್ದಿರುವದರಿಂದ ರೈತರು ಭೂಮಿ ಯನ್ನು ಉಳುಮೆ ಮಾಡಿ ಜೋಳ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ.
ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶಗಳಾದ ಕೂಡಿಗೆ, ಕೂಡು ಮಂಗಳೂರು, ಸೀಗೆಹೊಸೂರು, ಚಿಕ್ಕತ್ತೂರು-ದೊಡ್ಡತ್ತೂರು, ಹೆಬ್ಬಾಲೆ, ತೊರೆನೂರು, ಅಳುವಾರ, ಹಳಗೋಟೆ, ಆರನೇ ಹೊಸಕೋಟೆ, ಸಿದ್ಧಲಿಂಗಪುರ ವ್ಯಾಪ್ತಿಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಜೋಳ ಬಿತ್ತನೆ ಮಾಡುತ್ತಿದ್ದು, ರಾಸಯನಿಕ ಗೊಬ್ಬರ ಹಾಕಿ ಬಿತ್ತನೆ ಬೀಜವನ್ನು ಹಾಕು ವದರಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲವಾಗುವಂತೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಇಲಾಖೆಯಿಂದ ಪರೀಕ್ಷಿಸಲ್ಪಟ್ಟ ಉತ್ತಮ ಬಿತ್ತನೆ ಬೀಜದ ತಳಿಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.
ಈ ಬಗ್ಗೆ ಕೃಷಿ ಸಹಾಯಕ ನಿರ್ದೇಶಕ ಹೆಚ್.ಎಸ್. ರಾಜಶೇಖರ್ ರೈತರೊಂದಿಗೆ ಮಾತನಾಡುತ್ತಾ, ರೈತರು ತಮ್ಮ ಜಮೀನಿನ ಮಣ್ಣನ್ನು ಕೂಡಿಗೆಯಲ್ಲಿರುವ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಿಸಿ ಮಣ್ಣಿನ ಅನುಗುಣವಾಗಿ ಸಾವಯವ ಮತ್ತು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಂತರ ಮಣ್ಣಿಗೆ ಪೋಷಕಾಂಶದ ಅನುಗುಣಕ್ಕೆ ತಕ್ಕಂತೆ ಉತ್ತಮ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.
-ಕೆ.ಕೆ. ನಾಗರಾಜಶೆಟ್ಟಿ