ಮಡಿಕೇರಿ ಜೂ.4 :ಮುಂಗಾರು ಆರಂಭಕ್ಕೂ ಮೊದಲೇ ಪ್ರಾಕೃತಿಕ ವಿಕೋಪದ ಸಾಧ್ಯತೆಗಳನ್ನು ನೆಪಮಾಡಿ ಮಕ್ಕಂದೂರು ಪಂಚಾಯಿತಿ ವ್ಯಾಪ್ತಿಯ ಹೋಂಸ್ಟೇಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ನೀಡದಂತೆ ಹೋಂಸ್ಟೇ ಮಾಲೀಕರುಗಳಿಗೆ ನೋಟಿಸ್ ನೀಡಿರುವ ಪಿಡಿಒ ಕ್ರಮವನ್ನು ವಿರೋಧಿಸಿರುವ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜನರು ಅನಗತ್ಯವಾಗಿ ಭೀತಿಗೆ ಒಳಗಾಗದಂತೆ ಸೂಚಿಸಿದ್ದಾರೆ. ಮಕ್ಕಂದೂರು ಕೊಡವ ಸಮಾಜ ಮತ್ತು ಮಕ್ಕಂದೂರು ಹೋಂ ಸ್ಟೇ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಸಾಲಿನ ಮುಂಗಾರಿನ ಅವಧಿಯ ಭಾರೀ ಮಳೆಯಿಂದ 7 ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ನಡೆದಿತ್ತು, ಆದರೆ, ಆ ಹಂತದಲ್ಲಿ ಇಡೀ ಕೊಡಗೇ ಕೊಚ್ಚಿ ಹೋಯಿತು ಎಂದು ಪ್ರತಿಬಿಂಬಿಸಿರುವದು ಬೇಸರದ ವಿಚಾರವೆಂದು ವಿಷಾದಿಸಿದರು. ಕಳೆದ ಸಾಲಿನ ವಿಕೋಪಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಈ ಬಾರಿ ಜಾಗರೂಕರಾಗಿದ್ದಾರೆ. ಅವರ ಸ್ವಾಭಿಮಾನದ ಬದುಕಿಗೆ ಅನಗತ್ಯವಾಗಿ ತೊಂದರೆ ನೀಡುವದು ಸರಿಯಲ್ಲ. ತಮ್ಮ ಇತಿಮಿತಿಗಳನ್ನು ಅರಿಯದೆ ಮಕ್ಕಂದೂರು ಗ್ರಾ.ಪಂ ಪಿಡಿಒ ಪಂಚಾಯಿತಿ ವ್ಯಾಪ್ತಿಯ ಹೋಂ ಸ್ಟೇಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ

(ಮೊದಲ ಪುಟದಿಂದ) ನೀಡಬಾರದೆಂದು ನೋಟಿಸ್ ಜಾರಿ ಮಾಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಬಾರಿ ಮುಂಗಾರು ಇನ್ನೂ ಆರಂಭವಾಗಿಲ್ಲ. ಹಲವೆಡೆಗÀಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ನಗರ ವ್ಯಾಪ್ತಿಯಲ್ಲಿ ಎರಡು ದಿನಗಳಿಗೊಮ್ಮೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಂತಹ ಹಂತದಲ್ಲಿ ಪ್ರವಾಸಿಗರು ಪಂಚಾಯಿತಿ ವ್ಯಾಪ್ತಿಗೆ ಬಾರದಂತೆ ತಡೆಯುವ ನೋಟೀಸ್ ನೀಡುವ ಪಿಡಿಒ ಅವರು ಮೊದಲು ಜನರ ಮೂಲಭೂತ ಸಮಸ್ಯೆಗಳತ್ತ ಗಮನ ಹರಿಸಿ ಬಗೆಹರಿಸಲು ಮುಂದಾಗಲಿ ಎಂದರು. ಜನರನ್ನು ಆತಂಕಕ್ಕೆ ತಳ್ಳುವ ತುಘಲಕ್ ದರ್ಬಾರ್ ಮಾಡಬಾರದೆಂದು ಸುನಿಲ್ ಸುಬ್ರಮಣಿ ಎಚ್ಚರಿಕೆ ನೀಡಿದರು.

ಮಕ್ಕಂದೂರು ವಿಭಾಗದಲ್ಲಿ ಪ್ರಾಕೃತಿಕ ವಿಕೋಪದಿಂದ ಕಾಫಿ ನೆಲಕಚ್ಚಿರುವದರಿಂದ ಅಲ್ಲಿನ ಜನತೆ ಹೋಂಸ್ಟೇ ಮೂಲಕ ಬದುಕಿಗೊಂದು ಆರ್ಥಿಕ ಶಕ್ತಿಯನ್ನು ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದರು. ಇದೀಗ ನೋಟೀಸ್ ನೀಡುವ ಮೂಲಕ ಅದಕ್ಕೂ ಕುತ್ತು ತರುವ ಪ್ರಯತ್ನ ಮಾಡಿದ್ದಾರೆ. ನೋಟಿಸ್ ನೀಡುವದಿದ್ದಲ್ಲಿ ಆ ವಿಭಾಗದ ದೊಡ್ಡ ಮಟ್ಟದ ರೆಸಾರ್ಟ್‍ಗಳಿಗೆ ನೀಡಲಿ ಎಂದರು.

ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಮಕ್ಕಂದೂರು ಪಂಚಾಯ್ತಿ ವ್ಯಾಪ್ತಿಯಲ್ಲಿ ರೆಸಾರ್ಟ್‍ಗಳ ಆಮಿಷಕ್ಕೆ ಒಳಗಾಗಿ ಮಕ್ಕಂದೂರು ಪಿಡಿಓ ಅವರು ಹೋಂ ಸ್ಟೇಗಳಿಗೆ ನೋಟೀಸ್ ನೀಡಿದ್ದಾರೆ ಎಂದು ಆರೋಪಿಸಿದರು. ಯಾರ ಸಲಹೆ, ಸೂಚನೆಗಳನ್ನು ಪಡೆಯದೆ ನೋಟೀಸ್ ನೀಡಿರುವ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪಂಚಾಯಿತಿ ವ್ಯಾಪ್ತಿ ಮತ್ತು ಸಮೀಪದ ಪಂಚಾಯಿತಿಗಳಲ್ಲಿ ದೊಡ್ಡ ಮಟ್ಟದಲ್ಲಿರುವ ರೆಸಾರ್ಟ್‍ಗಳಲ್ಲಿ ತಂಗುವ ಪ್ರವಾಸಿಗರಿಗೆ ಯಾವದೇ ತೊಂದರೆ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಮಕ್ಕಂದೂರು ಪಿಡಿಒ ಹೋಂಸ್ಟೇಗಳಿಗೆ ನೋಟೀಸ್ ನೀಡುವದಕ್ಕೂ ಮೊದಲು ಗ್ರಾಮಸಭೆÉಯನ್ನು ಕರೆದು ನಿರ್ಧಾರ ಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಕ್ಕಂದೂರು ಕೊಡವ ಸಮಾಜದ ಉಪಾಧ್ಯಕ್ಷ ಹಂಚೆಟ್ಟೀರ ಮನು ಮುದ್ದಪ್ಪ, ಖಜಾಂಚಿ ಮಧು ಮಂದಣ್ಣ ಹಾಗೂ ಮಕ್ಕಂದೂರು ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಅಚ್ಚಯ್ಯ ಉಪಸ್ಥಿತರಿದ್ದರು.