ಕೂಡಿಗೆ, ಜೂ. 4: ಹಾಸನ-ಕುಶಾಲನಗರ ರಾಜ್ಯ ಹೆದ್ದಾರಿಯ ತೊರೆನೂರು ಗ್ರಾಮದಲ್ಲಿ ಬೆಳಿಗ್ಗೆ 10.30ರ ಸಂದರ್ಭ ಲಾರಿ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ನಿವೃತ್ತ ಹಿರಿಯ ಕೆಎಎಸ್ ಅಧಿಕಾರಿ ಡಾ. ಕರ್ಣಯ್ಯನ ಎ. ಅಪ್ಪಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮದ ಕರ್ಣಯ್ಯನ ಡಾ. ಕೆ.ಎ. ಅಪ್ಪಯ್ಯ (65) ಅವರು ಬೆಂಗಳೂರಿನ ಹೆಬ್ಬಾಳ್‍ನಲ್ಲಿ ನೆಲೆಸಿದ್ದು, ಮಂಗಳವಾರ ತಮ್ಮ ಊರಿನ ನಾಗದೇವತೆ ಪೂಜೆಗೆ ಪತ್ನಿಯ ಜೊತೆ ತೆರಳುವ ಸಂದರ್ಭ ತೊರೆನೂರಿನಲ್ಲಿ ಈ ಘಟನೆ ನಡೆದಿದೆ.ಕುಶಾಲನಗರದ ಕಡೆಯಿಂದ ಕೊಣನೂರು ಕಡೆಗೆ ಸಂಚರಿಸುತ್ತಿದ್ದ ಲಾರಿ (ಕೆ.ಎ. 42-3826) ಮತ್ತು ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಕಾರು (ಕೆ.ಎ.04 ಎಂ.ಕೆ.4095) ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಲಾರಿ ಎಡಬದಿಯ ಗದ್ದೆಹಳ್ಳಕ್ಕೆ ತಿರುಗಿದ್ದು, ಕಾರು ರಸ್ತೆಯ ಎಡಬದಿಯ ತಡೆಗೋಡೆಗೆ ಬಡಿದು ನಜ್ಜುಗುಜ್ಜಾಗಿದೆ.

ಡಿಕ್ಕಿಯ ರಭಸಕ್ಕೆ ಕಾರು ಚಾಲನೆ ಮಾಡುತ್ತಿದ್ದ ಅಪ್ಪಯ್ಯ ಅವರಿಗೆ ಗಂಭೀರ ಗಾಯವಾಗಿತ್ತು. ನಜ್ಜುಗುಜ್ಜಾಗಿರುವ ಕಾರಿನೊಳಗೆ ಸಿಲುಕಿದ್ದ ಮೃತದೇಹವನ್ನು ಯಂತ್ರದ ಸಹಾಯದಿಂದ ಕಾರಿನ ಭಾಗಗಳನ್ನು ಕತ್ತರಿಸಿ ಹೊರ ತೆಗೆಯುವಂತಾಯಿತು. ಕಾರಿನಲ್ಲಿದ್ದ ಅಪ್ಪಯ್ಯ ಅವರ ಪತ್ನಿ ಮೀನಾಕ್ಷಿ ಅವರಿಗೂ ತಲೆಗೆ ಪೆಟ್ಟಾಗಿದ್ದು, ಅವರಿಗೆ ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮೈಸೂರಿನ ಅಪೋಲೋ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆ.ಎ.ಅಪ್ಪಯ್ಯ ಅವರ ಮೃತದೇಹವನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

ಮೃತ ಅಪ್ಪಯ್ಯ ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ನಿವೃತ್ತಿಯಾಗಿ ನಿವೃತ್ತಿ ಜೀವನವನ್ನು ಬೆಂಗಳೂರಿನ ಹೆಬ್ಬಾಳ್‍ನಲ್ಲಿ ಸ್ವಂತ ಮನೆಯಲ್ಲಿ ಜೀವನ ಸಾಗಿಸುತ್ತಿದ್ದರು. ಮೃತರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಅಪ್ಪಯ್ಯ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಅವರ ಆಪ್ತ ಕಾರ್ಯದರ್ಶಿಯಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಕಾರ್ಯದರ್ಶಿಯಾಗಿ ಎರಡು ವರ್ಷ ಅಲ್ಲದೆ, ಸದಾನಂದಗೌಡರ ಆಪ್ತ ಕಾರ್ಯದರ್ಶಿಯಾಗಿ ಒಂದೂವರೆ ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು.

ಲಾರಿ ಚಾಲಕ ಪ್ರಕಾಶ್ ಎಂಬವನಿಗೂ ಗಾಯಗಳಾಗಿದ್ದು, ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾನೆ ಸ್ಥಳಕ್ಕೆ ಕುಶಾಲನಗರ ಡಿವೈಎಸ್‍ಪಿ ದಿನಕರ್‍ಶೆಟ್ಟಿ, ವೃತ್ತ ನಿರೀಕ್ಷಕ ದಿನೇಶ್‍ಕುಮಾರ್, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸೋಮೇಗೌಡ ಭೇಟಿ ನೀಡಿ ಪರಿಶೀಲಿಸಿ, ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.