ಮಡಿಕೇರಿ, ಜೂ. 3: ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಹಲವು ಕುಟುಂಬಗಳು ಮನೆ ಕಳೆದುಕೊಂಡಿದ್ದರು. ಆ ದಿಸೆಯಲ್ಲಿ ಸರ್ಕಾರ ಕರ್ಣಂಗೇರಿ, ಮಾದಪುರ, ಮದೆನಾಡು ಮತ್ತಿತರ ಗ್ರಾಮಗಳಲ್ಲಿ ಮನೆ ನಿರ್ಮಿಸಲಾಗುತ್ತಿದೆ.
ಈಗಾಗಲೇ ಕರ್ಣಂಗೇರಿಯಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಮೂಲಭೂತ ಸೌಲಭ್ಯ ಕಲ್ಪಿಸಲು ಬಾಕಿ ಇದೆ. ಹಾಗೆಯೇ ಮದೆನಾಡು ಗ್ರಾಮದಲ್ಲಿ 80 ಮನೆಗಳ ಕಾಮಗಾರಿ ಪೂರ್ಣಗೊಂಡಿದ್ದು, ಮೂಲಭೂತ ಸೌಲಭ್ಯ ಕಲ್ಪಿಸಬೇಕಿದೆ.
ಮದೆನಾಡು, ಕಾಟಕೇರಿ, ಜೋಡುಪಾಲ, ಎರಡನೇ ಮೊಣ್ಣಂಗೇರಿ ಭಾಗದಲ್ಲಿ ಮನೆ ಕಳೆದುಕೊಂಡ ಸುಮಾರು 77 ಕುಟುಂಬಗಳು ಇದ್ದು, ಸದ್ಯ ಮದೆನಾಡು ಗ್ರಾಮದ ಬಳಿ 80 ಮನೆಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ 77 ಕುಟುಂಬಗಳಿಗೆ ಮನೆ ಹಂಚಿಕೆ ಪ್ರಕ್ರಿಯೆಯು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಅಧ್ಯಕ್ಷತೆಯಲ್ಲಿ ಮತ್ತು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರ ಉಪಸ್ಥಿತಿಯಲ್ಲಿ ಗುರುವಾರ ನಡೆಯಿತು. ಮದೆನಾಡು, ಕಾಟಕೇರಿ, ಜೋಡುಪಾಲ, ಎರಡನೇ ಮೊಣ್ಣಂಗೇರಿ ಸೇರಿದಂತೆ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಒಟ್ಟು 124 ಕುಟುಂಬದ ಸಂತ್ರಸ್ತರು ಮದೆನಾಡು ಗ್ರಾಮದಲ್ಲಿ ಮನೆ ಬೇಕೆಂದು ಮನವಿ ಮಾಡಿದ್ದು. ಆದರೆ ಸ್ಥಳೀಯ 77 ಕುಟುಂಬದವರಿಗೆ ಮನೆಗಳ ಹಂಚಿಕೆ ಮಾಡಲಾಯಿತು. ಇದಕ್ಕೆ ಸಂತ್ರಸ್ತ ಕುಟುಂಬದವರು ಒಪ್ಪಿಗೆ ನೀಡಿದರು.
ಉಳಿದ 47 ಕುಟುಂಬಗಳಿಗೆ ಜಂಬೂರಿನಲ್ಲಿ ಮನೆ ನೀಡಲಾಗುವದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಮತ್ತು ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ತಿಳಿಸಿದರು.