ಮಡಿಕೇರಿ, ಜೂ. 4: ಜಿಲ್ಲೆಯ ಹಲವು ತೋಟಗಳಲ್ಲಿ ಲೋಹದ ಏಣಿಗಳನ್ನು ಬಳಸಿ ಕೃಷಿ, ತೋಟಗಾರಿಕಾ ಚಟುವಟಿಕೆ ಮಾಡುತ್ತಿರುವ ಸಮಯದಲ್ಲಿ ಉಪಯೋಗಿಸುತ್ತಿದ್ದ ಏಣಿ ಜಾರಿ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಮಾನವ ಜೀವಹಾನಿ ಆಗುತ್ತಿರುವ ವಿಚಾರ ವರದಿಯಾಗಿರುತ್ತದೆ. ಜಿಲ್ಲೆಯಲ್ಲಿ ಕಳೆದ 4 1/2 ವರ್ಷಗಳಲ್ಲಿ ಲೋಹದ ಏಣಿಗಳ ಬಳಕೆಯಿಂದ ವಿದ್ಯುತ್ ಸ್ಪರ್ಶಗೊಂಡು 35 ಕಾರ್ಮಿಕರು ಮೃತಪಟ್ಟಿರುವದು ಸಂಬಂಧಪಟ್ಟ ಇಲಾಖೆಗಳಲ್ಲಿ ದಾಖಲಾಗಿರುತ್ತದೆ.
ತೋಟಗಳಲ್ಲಿ ಬಳಸುವ ಲೋಹದ ಏಣಿಗಳು ಉತ್ತಮ ವಾಹಕಗಳಾಗಿದ್ದು, ಇವುಗಳ ಉದ್ದ ಸಾಮಾನ್ಯವಾಗಿ 20 ಅಡಿಗಳಿಗಿಂತ ಅಧಿಕವಾಗಿರುತ್ತದೆ. ಜಿಲ್ಲೆಯ ಕೆಲವು ತೋಟಗಳಲ್ಲಿ ಲೋಹದಿಂದ ನಿರ್ಮಿತವಾದ ಏಣಿಗಳ ಬದಲಾಗಿ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ವಿದ್ಯುತ್ ನಿರೋಧಕ ಏಣಿಗಳನ್ನು ಬಳಸಲಾಗುತ್ತಿದ್ದು, ಇವುಗಳು ಶಾಖ ವಾಹಕಗಳಾಗಿರದೆ, ಕಠಿಣ ಹವಾಮಾನ ಪರಿಸ್ಥಿತಿಗೆ ಉನ್ನತ ಪ್ರತಿರೋಧವನ್ನು ಹೊಂದಿರುತ್ತದೆ. ಲೋಹದಿಂದ ನಿರ್ಮಿತವಾದ ಏಣಿಗಳಿಗೆ ಹೋಲಿಸಿದಲ್ಲಿ ಈ ಏಣಿಗಳ ಬಳಕೆ ಅತ್ಯಂತ ಸುರಕ್ಷಿತವಾಗಿರುತ್ತದೆ ಮತ್ತು ವಿದ್ಯುತ್ ಆಘಾತವಾಗುವ ಯಾವದೇ ಸಾಧ್ಯತೆಗಳಿರುವದಿಲ್ಲ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್, ಚೆಸ್ಕಾಂ ಇವರುಗಳು ವರದಿಯಲ್ಲಿ ದೃಢೀಕರಿಸಿದ್ದಾರೆ.
ಹಾಗಾಗಿ ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ವಾಹಕ ಲೋಹದ ಏಣಿಗಳಿಗೆ ಪರ್ಯಾಯವಾಗಿ ವಿದ್ಯುತ್ ನಿರೋಧಕ ವಸ್ತುಗಳಾದ ಫೈಬರ್, ಬಿದಿರು ಇತ್ಯಾದಿಗಳಿಂದ ನಿರ್ಮಿತವಾದ ಏಣಿಗಳನ್ನು ಕೃಷಿ, ತೋಟಗಾರಿಕೆ ಮತ್ತು ಇತರ ಯಾವದೇ ಚಟುವಟಿಕೆಗಳಿಗೆ ಬಳಸುವ ಮೂಲಕ ಲೋಹ ನಿರ್ಮಿತ ಏಣಿಗಳಿಂದ ಉಂಟಾಗುತ್ತಿರುವ ವಿದ್ಯುತ್ ಅವಘಡಗಳನ್ನು ತಡೆಗಟ್ಟಲು ಜಿಲ್ಲೆಯ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಮನವಿ ಮಾಡಿದೆ.