ಸೋಮವಾರಪೇಟೆ, ಜೂ. 4: ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದ ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ವನಿತಾ ಮಂಜುನಾಥ್ ಅವರಿಗೆ, ಲಯನ್ಸ್ ಹಾಗೂ ಲಿಯೋ ಕ್ಲಬ್ ವತಿಯಿಂದ ನಿರ್ಮಿಸಲಾದ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.

"ಹೋಂ ಫಾರ್ ದ ಹೋಮ್‍ಲೆಸ್" ಯೋಜನೆಯಡಿ ರೂ. 3.50ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮನೆಯ ಕೀಲಿ ಕೈಯನ್ನು ಫಲಾನುಭವಿ ವನಿತಾ ಮಂಜುನಾಥ್ ಅವರಿಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ಕೆ. ದೇವದಾಸ್ ಭಂಡಾರಿ ಹಸ್ತಾಂತರ ಮಾಡಿದರು.

ಈ ಸಂದರ್ಭ ಮಾತನಾಡಿದ ದೇವದಾಸ್ ಭಂಡಾರಿ, ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜೀವ, ಆಸ್ತಿಪಾಸ್ತಿ ಹಾನಿಯಾಗಿದೆ. ನೊಂದವರಿಗೆ ಅನೇಕರು ಸ್ಪಂದಿಸಿದ್ದಾರೆ. ಲಯನ್ಸ್ ಸಂಸ್ಥೆ ಕೂಡ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ಮೂರು ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ವಿತರಿಸಿದ್ದೇವೆ ಎಂದರು.

ಸರ್ಕಾರ ಮಾಡುವ ಕೆಲಸವನ್ನು ಸರ್ಕಾರೇತರ ಸಂಸ್ಥೆಗಳೂ ಮಾಡುತ್ತಿರುವದು ಶ್ಲಾಘನೀಯ. ಇಲ್ಲಿನ ಲಯನ್ಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಮಾಜಮುಖಿ ಕೆಲಸ ಅಭಿನಂದನಾರ್ಹ ಎಂದರು.

ಲಯನ್ಸ್ ಅಧ್ಯಕ್ಷ ಎಸ್.ಎನ್.ಯೋಗೇಶ್ ಮಾತನಾಡಿ, ಪಟ್ಟಣದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಪಿ.ಆರ್.ಮಂಜುನಾಥ್ ಅವರ ಮರಣದ ನಂತರ ಅವರ ಕುಟುಂಬ ಕಷ್ಟದಲ್ಲಿತ್ತು. ಇಂತಹ ಸಂದರ್ಭದಲ್ಲೇ ಮಳೆಗಾಲದಲ್ಲಿ ಮನೆಯೂ ಕುಸಿದು ಬಿತ್ತು. ಕುಟುಂಬ ಸಂಕಷ್ಟದಲ್ಲಿದ್ದಾಗ ಲಯನ್ಸ್ ಪದಾಧಿಕಾರಿಗಳು ಈ ಕುಟುಂಬಕ್ಕೆ ಸಹಾಯ ಮಾಡಲು ತೀರ್ಮಾನಿಸಿ, ಲಯನ್ಸ್ ಜಿಲ್ಲಾ ರಾಜ್ಯಪಾಲರ ಅನುಮತಿ ಪಡೆದು ಮನೆ ನಿರ್ಮಿಸಿಕೊಟ್ಟಿದ್ದೇವೆ ಎಂದರು.

ಮನೆ ನಿರ್ಮಾಣಕ್ಕೆ ಕೆಲ ದಾನಿಗಳು ಸಹಕಾರ ನೀಡಿದ್ದಾರೆ. ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಹಸ್ತ ನೀಡುವ ಮನೋ ಭಾವನೆ ಎಲ್ಲರಲ್ಲೂ ಮೂಡಬೇಕು ಎಂದು ಅಭಿಪ್ರಾಯಿಸಿದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪಿ.ಎನ್.ಪೆಮ್ಮಯ್ಯ, ವಲಯಾಧ್ಯಕ್ಷ ಎ.ಎಸ್.ಮಹೇಶ್, ಕಾರ್ಯದರ್ಶಿ ಮಂಜುನಾಥ್ ಚೌಟ, ಖಜಾಂಚಿ ಎಚ್.ಎಂ. ಬಸಪ್ಪ, ಜೇಸಿ ಅಧ್ಯಕ್ಷ ಪುರುಷೋತ್ತಮ್, ಗುತ್ತಿಗೆದಾರ ಸುರೇಶ್ ಹಾಗು ಲಯನ್ಸ್ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.