ಸೋಮವಾರಪೇಟೆ, ಜೂ. 4: ಯುಎಸ್ಎಯಲ್ಲಿರುವ ಭಾರತೀಯರು ಸೇರಿ ಸ್ಥಾಪಿಸಿರುವ ಕಾಟಿ ಪ್ರಿಮಿಯರ್ ಲೀಗ್(ಕೆಪಿಎಲ್) ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಕೋಲಾರ-ಚಿಕ್ಕಬಳ್ಳಾಪುರದ ಬಯಲುಸೀಮೆ ಯುವಶಕ್ತಿ ತಂಡದ ಪದಾಧಿಕಾರಿಗಳು, ಕಳೆದ ಸಾಲಿನ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದ ಸಮೀಪದ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತರಿಗೆ ಆರ್ಥಿಕ ಸಹಾಯಧನ ವಿತರಿಸಿದರು. ಹರಪಳ್ಳಿ ಗ್ರಾಮದ ಸಮುದಾಯ ಭವನ ಆವರಣದಲ್ಲಿ ಆಯೋಜಿಸಲಾಗಿದ್ದ ಸರಳ ಸಮಾರಂಭದಲ್ಲಿ ಎರಡೂ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು. ಭಾರೀ ಮಳೆ-ಗಾಳಿಗೆ ಮನೆ ಜಖಂಗೊಂಡು ಸಂತ್ರಸ್ತರಾಗಿದ್ದ ತೋಳೂರುಶೆಟ್ಟಳ್ಳಿಯ ಗೀತಾ ಅವರಿಗೆ 25 ಸಾವಿರ, ಕೂತಿ ಗ್ರಾಮದ ಜಗದೀಶ್ ಅವರಿಗೆ 15 ಸಾವಿರ ಸೇರಿದಂತೆ ಇತರ 8 ಮಂದಿ ಫಲಾನುಭವಿಗಳಿಗೆ ಸಹಾಯ ಧನ ನೀಡಲಾಯಿತು.
ಇದರೊಂದಿಗೆ ಹರಪಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಸುಮಾರು 12 ಕುಟುಂಬಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಸರ್ಗಿಕ ನೀರಿನ ಸಂಪರ್ಕ ಕಲ್ಪಿಸಲು ಸಂಸ್ಥೆಯಿಂದ 80 ಸಾವಿರ ಧನ ಸಹಾಯವನ್ನು ಗ್ರಾ.ಪಂ. ಸದಸ್ಯ ಈರಪ್ಪ ಅವರ ಸಮ್ಮುಖದಲ್ಲಿ ಕೆಪಿಎಲ್ ಸಂಸ್ಥೆಯ ಅವಿನಾಶ್ ಬಸವರಾಜು ಮತ್ತು ಯುವಶಕ್ತಿ ಸಂಸ್ಥೆಯ ಬಾಬುರೆಡ್ಡಿ ಹಸ್ತಾಂತರಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ತೋಳೂರುಶೆಟ್ಟಳ್ಳಿಯ ಶ್ರಾವಣಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಸ್ಪೂರ್ತಿ, ಸಂಜನ ಅವರುಗಳಿಗೆ ತಲಾ 5 ಸಾವಿರದಂತೆ ಪ್ರೋತ್ಸಾಹಕ ಧನ ಒದಗಿಸಲಾಯಿತು. ಮರದಿಂದ ಬಿದ್ದು ಅಂಗವೈಕಲ್ಯಕ್ಕೆ ಒಳಗಾಗಿರುವ ತೋಳೂರುಶೆಟ್ಟಳ್ಳಿಯ ಮಹೇಶ್ ಅವರಿಗೆ 5 ಸಾವಿರ ಸಹಾಯಧನ ನೀಡಲಾಯಿತು.