ಮಡಿಕೇರಿ, ಜೂ. 3: ನಗರ ಪ್ರದೇಶದ ವ್ಯಾಪ್ತಿಯಲ್ಲಿ ಶುಚಿತ್ವ, ಉತ್ತಮ ಆರೋಗ್ಯ ಮತ್ತು ಉತ್ತಮ ಪರಿಸರ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ತಾ. 4 ರಿಂದ (ಇಂದು) ಹಸಿ ಕಸ, ಒಣ ಕಸ ಮತ್ತು ವಿಷಕಾರಿ ಕಸವನ್ನು ಬೇರ್ಪಡಿಸಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ನಗರಸಭಾ ಆಡಳಿತಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.ನಗರದ ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಪತ್ರಕರ್ತರ ಜೊತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಗರಸಭೆ ವತಿಯಿಂದ ಮನೆ ಮನೆಗೆ ಕಸ ಸಂಗ್ರಹಿಸಲು ಮಿನಿ ವಾಹನ ಆಗಮಿಸುವ ಸಂದರ್ಭದಲ್ಲಿ ಹಸಿ ಕಸ, ಒಣ ಕಸ ಮತ್ತು ವಿಷಕಾರಿ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಕೋರಿದರು.
ನಗರದ ಜನತೆ ಮುಂದಿನ ಮೂರು ವಾರಗಳೊಳಗೆ ಕಸ ವಿಲೇವಾರಿಯ ಹೊಸ ನಿಯಮಕ್ಕೆ ಹೊಂದಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹವರಿಂದ ಯಾವದೇ ಕಾರಣಕ್ಕೂ ಕಸವನ್ನು ಸಂಗ್ರಹಿಸುವದಿಲ್ಲವೆಂದು ಸ್ಪಷ್ಟಪಡಿಸಿದರು.
ಮೆಡಿಕಲ್ ಅಂಗಡಿಗಳು ಹಾಗೂ ಆಸ್ಪತ್ರೆಗಳ ತ್ಯಾಜ್ಯವನ್ನು ನಗರಸಭೆ ಸಂಗ್ರಹಿಸುವದಿಲ್ಲ. ಅವರುಗಳೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದರು.
ಒಣ ತ್ಯಾಜ್ಯವನ್ನು ಖರೀದಿಸಲು ‘ಹಸಿರು ದಳ’ ಎಂಬ ಸಂಸ್ಥೆ ಮುಂದೆ ಬಂದಿದ್ದು, ಆಗಿಂದಾಗ್ಗೆ ಒಣ ತ್ಯಾಜ್ಯ ವಿಲೇವಾರಿ ಆಗುತ್ತದೆ ಎಂದು ಅವರು ವಿವರಿಸಿದರು.
ಹಸಿ ಕಸವನ್ನು ಬೇರ್ಪಡಿಸಿ ನೀಡುವದರಿಂದ ಅದನ್ನು ಪ್ರತ್ಯೇಕ ವಿಭಾಗಗಳಲ್ಲಿ ಸಂಗ್ರಹಿಸಿ ಗೊಬ್ಬರವಾಗಿ ಮಾರ್ಪಡಿಸಲು ಸಹಕಾರಿಯಾಗುತ್ತದೆ. ಆದ್ದರಿಂದ ಇದಕ್ಕೆ ನಗರದ ಜನತೆಯ ಸ್ಪಂದನೆ ಅಗತ್ಯ ಎಂದರು.
ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಯಂತ್ರವಿದ್ದು, ಅದರ ಮಾರುಕಟ್ಟೆ ವ್ಯವಸ್ಥೆಯನ್ನು ಕಾಲೂರಿನ ಸಂಸ್ಥೆಗೆ ವಹಿಸಲಾಗುವದು ಎಂದರು. ವಿಷಕಾರಿ ತ್ಯಾಜ್ಯವನ್ನು ಪಡೆಯಲು ಯಾರೂ ಮುಂದೆ ಬಾರದಿದ್ದು, ಸರಕಾರಿ ಆಸ್ಪತ್ರೆಯಿಂದ ತ್ಯಾಜ್ಯ ಪಡೆಯುವ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ ಎಂದರು.
ಮಡಿಕೇರಿ ನಗರದ ಕಸವನ್ನು ಸ್ಟೀವರ್ಟ್ ಹಿಲ್ ಬೆಟ್ಟದಲ್ಲಿ ಸುರಿಯಲಾಗುತ್ತದೆ. ಮಳೆಗಾಲದಲ್ಲಿ ಅಲ್ಲಿನ ಕಸವು ಇಳಿಜಾರಿಗೆ ಹೋಗುತ್ತದೆ. ಇದರಿಂದ ಅಶುಚಿತ್ವ ಉಂಟಾಗಿ ಅಲ್ಲಿನ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಕಸವನ್ನು ಬೇರ್ಪಡಿಸಿ ನೀಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬುಧವಾರ ಮತ್ತು ಶನಿವಾರ ಒಣ ಕಸವನ್ನು ಹಾಗೂ ವಿಷಕಾರಿ ತ್ಯಾಜ್ಯ ಸಂಗ್ರಹಿಸಲಾಗುತ್ತದೆ. ಎಲ್ಲಾ ದಿನದಲ್ಲಿ ಹಸಿ ಕಸ, ಪಡೆಯಲಾಗುತ್ತದೆ ಎಂದು ವಿವರಿಸಿದರು.
ಸದ್ಯ 20 ಪೌರ ಕಾರ್ಮಿಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳಲಾಗಿದೆ. ಪೌರ ಕಾರ್ಮಿಕರಿಗೆ ಆರೋಗ್ಯ ಸೇವೆ ಕಲ್ಪಿಸಲು ಮುಂದಾಗಲಾಗಿದೆ ಎಂದರು.
ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ಅವರು ಮಾತನಾಡಿ ಮಡಿಕೇರಿ ನಗರದಲ್ಲಿ ಶುಚಿತ್ವ ಪರಿಸರಕ್ಕೆ ಒತ್ತು ನೀಡುವದು, ಸ್ವಚ್ಛತೆ ಕಾಪಾಡುವದು ಮತ್ತಿತರ ಕಾರ್ಯಕ್ರಮಗಳಿಗೆ ಹಸಿರು ಪಡೆ ಹೆಸರಿನಲ್ಲಿ 200 ಯುವ ಜನರನ್ನು ನೋಂದಣಿ ಮಾಡುವ ಗುರಿ ಇದ್ದು, ಈಗಾಗಲೇ 35 ಮಂದಿ ಯುವ ಜನರು ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
ಪ್ರತೀ ಶನಿವಾರ ನಗರದದಲ್ಲಿ ಸಂಚರಿಸಿ ಈ ಬಗ್ಗೆ ಜನರಿಗೆ ಮನವರಿಕೆ ಮಾಡಲಾಗುವದು. ಸ್ವಚ್ಛತೆಗೆ ಒತ್ತು ನೀಡಲಾಗುತ್ತದೆ ಎಂದು ಅವರು ಹೇಳಿದರು.
ಗ್ರೀನ್ ಸಿಟಿ ಫೋರಂನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಮಾತನಾಡಿ ಹಸಿ ಕಸ, ಒಣ ಕಸ ಮತ್ತು ವಿಷಕಾರಿ
(ಮೊದಲ ಪುಟದಿಂದ) ಕಸವನ್ನು ಬೇರ್ಪಡಿಸಿ ನೀಡುವಂತಾಗಬೇಕು. ಹಸಿ ಕಸಕ್ಕೆ ಹಸಿರು ಬಕೆಟ್, ವಿಷಕಾರಿ ತ್ಯಾಜ್ಯಕ್ಕೆ ಕೆಂಪು ಬಕೆಟ್ ಹಾಗೂ ಒಣ ಕಸಕ್ಕೆ ಬ್ಯಾಗ್ ಬಳಸಲು ಸಲಹೆ ನೀಡಿದರು. ಹಾಗೆಯೇ ಮನೆಯಲ್ಲಿಯೇ ಕಸವನ್ನು ಗೊಬ್ಬರವನ್ನಾಗಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಫಾರ್ ಟುಮಾರೋ ಸಂಸ್ಥೆಯ ಕಾವೇರಪ್ಪ ಅವರು ಪ್ಲಾಸ್ಟಿಕ್ ಮುಕ್ತ ಕೊಡಗು ಜಿಲ್ಲೆಯನ್ನಾಗಿ ಮಾಡಲು ಎಲ್ಲರೂ ಪಣ ತೊಡಬೇಕಿದೆ ಎಂದರು. ಜನತೆ ಮತ್ತು ಪ್ರಕೃತಿಯನ್ನು ಏಕ ರೀತಿಯಲ್ಲಿ ಕಾಣುವಂತೆ ಕರೆ ನೀಡಿದರು.
ಧನ್ಯ ಅವರು ಮಾತನಾಡಿ ಪರಿಸರ ಮಲಿನವಾಗದಂತೆ ನೋಡಿಕೊಳ್ಳುವದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಪರಿಸರ ಸ್ವಚ್ಛತೆಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.
ಸಮಾಜ ಸೇವಕಿ ಮೋಂತಿ ಗಣೇಶ್ ಅವರು ನಗರ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಹಲವು ಸೂಚನೆ ನೀಡಿದರು.
ಸ್ವಚ್ಛತೆ, ಶುಚಿತ್ವ ಸಂಬಂಧಿಸಿದಂತೆ ದೂರುಗಳು ಅಥವಾ ಮಾಹಿತಿಯನ್ನು ಪಡೆಯಲು ವಾಟ್ಸಪ್ ನಂಬರ್ ನೀಡಲಾಗುವದು. ಕೋಳಿ ಹಾಗೂ ಕುರಿ ಮಾಂಸದ ಕಸ ಸಂಗ್ರಹಣೆ ಸಂಬಂಧಿಸಿದಂತೆ ಗಂಭೀರವಾಗಿ ಪರಿಗಣಿಸಲಾಗುವದು ಎಂದು ಡಿಸಿ ಅವರು ಹೇಳಿದರು.
ಸ್ವಚ್ಛತಾ ಅಭಿಯಾನ ಮತ್ತು ಯೋಜನೆಯ ಕುರಿತು ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ಸರ್ಕಾರಿ ಸಂಸ್ಥೆಗಳು ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರಡಿ ರಾಷ್ಟ್ರೀಯ ಹಸಿರು ನ್ಯಾಯ ಪೀಠದ ಆದೇಶವನ್ನು ಅನುಷ್ಠಾನಗೊಳಿಸುವ ಉದ್ದೇಶದಿಂದ ಜಿಲ್ಲಾಡಳಿತ ಜಿಲ್ಲಾ ಮಟ್ಟದ ವಿಶೇಷ ಕಾರ್ಯಪಡೆ ರಚಿಸಿದೆ.
ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಈ ಸಮಿತಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧ್ಯಕ್ಷ, ಗ್ರೀನ್ ಸಿಟಿ ಫೋರಂನ ಅಧ್ಯಕ್ಷ, ಸದಸ್ಯರಾಗಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕೊಡಗು ಫಾರ್ ಟುಮಾರೊ ಸಂಘಟನೆ ವಿಶೇಷ ಆಹ್ವಾನಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ.
ಘನತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಯೋಜನೆಯಡಿ ಮಡಿಕೇರಿ ನಗರದಲ್ಲಿ ಸ್ವಚ್ಛತೆ ಮತ್ತು ಘನ ತ್ಯಾಜ್ಯ ನಿರ್ವಹಣೆ ಮಾಡಲು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ನಗರದಲ್ಲಿ ಕಸ ಸಂಗ್ರಹ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾಡಳಿತದ ಸಹಕಾರದೊಂದಿಗೆ ನಗರಸಭೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ನಿರ್ವಹಿಸಲಿವೆ. ಕುಟ್ಟದಲ್ಲಿ ಈಗಾಗಲೇ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಯಶಸ್ಸು ಕಂಡಿರುವ ಹಸಿರು ದಳ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಪರಿಣಿತಿ ಹೊಂದಿರುವ ಗುಜರಾತ್‍ನ ವಿಜ್ಞಾನಿ, ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಗಿಣಿ ಜೈನ್ ನೇತೃತ್ವದ ಸಂಸ್ಥೆಯ ಸಹಕಾರ ಪಡೆದುಕೊಳ್ಳಲಾಗುವದು.
ಪ್ರಸ್ತುತ ಮಡಿಕೇರಿ ನಗರಸಭೆಯಲ್ಲಿ ಪೌರ ಕಾರ್ಮಿಕರ ಕೊರತೆ ಇರುವದರಿಂದ ಹೆಚ್ಚುವರಿ 20 ಮಂದಿ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ರಾಗಿಣಿ ಜೈನ್ ಅವರು ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸ್ಟೋನ್ ಹಿಲ್ ಪ್ರದೇಶವನ್ನು ವೀಕ್ಷಿಸಿ ಅಧ್ಯಯನ ನಡೆಸಿದ್ದು, ಇಲ್ಲಿ ಸೃಷ್ಟಿಯಾಗುತ್ತಿರುವ ಸಮಸ್ಯೆಯನ್ನು ನಿವಾರಿಸಲು ಮತ್ತು ಘನತ್ಯಾಜ್ಯಗಳನ್ನು ನಿರ್ವಹಣೆ ಮಾಡಲು ಅನೇಕ ಸಲಹೆಗಳನ್ನು ನೀಡಿದ್ದಾರೆ. ಇಲ್ಲಿ ಸಂಗ್ರಹಿಸಲ್ಪಟಿರುವ ರಾಶಿ ರಾಶಿ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ಸಲಹೆಗಳನ್ನು ನೀಡಿದ್ದಾರೆ. ಸುಲಭವಾಗಿ ಈ ತ್ಯಾಜ್ಯಗಳನ್ನು ನಿರ್ವಹಣೆ ಮಾಡಬಹುದೆಂದು ತಿಳಿಸಿದ್ದಾರೆ.
ನೂತನ ತಾಂತ್ರಿಕತೆಯನ್ನು ಬಳಸಿ ಹಸಿಕಸವನ್ನು ಅದೇ ಪ್ರದೇಶದಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ ಮತ್ತು ಒಣಕಸವನ್ನು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಟ್ಟ ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಸಿಮೆಂಟ್ ಸಂಸ್ಥೆಗಳಿಗೆ ಖರೀದಿ ಮಾಡಲು ಕಾನೂನಿನಡಿ ಅವಕಾಶ ನೀಡಲಾಗುವದು. ಮುಂದಿನ ದಿನಗಳಲ್ಲಿ ಒಣಕಸ ಮತ್ತು ಹಸಿಕಸದ ವಿಲೇವಾರಿಗೆ ಪ್ರತ್ಯೇಕ ಪ್ರತ್ಯೇಕ ಜಾಗವನ್ನು ಗುರುತಿಸಿ ತಾಂತ್ರಿಕವಾಗಿ ಆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುವದು.
ಮಡಿಕೇರಿ ನಗರದ ಪ್ರತಿ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ವಿಲೇವಾರಿ ಮಾಡುವ ಕಾರ್ಯಕ್ಕೆ ಹಸಿರುದಳ ಕೈಜೋಡಿಸಲಿದೆ. ಪ್ರತಿ ಮನೆಗೆ ಹಸಿ ಕಸ ಮತ್ತು ಒಣಕಸವನ್ನು ಬೇರೆ ಬೇರೆಯಾಗಿ ಹಾಕಲು ತಲಾ ಎರಡು ಬಾಸ್ಕೆಟ್‍ಗಳನ್ನು ನೀಡಲಾಗುತ್ತದೆ. ಹಸಿಕಸವನ್ನು ಮನೆಯಲ್ಲಿಯೇ ಗೊಬ್ಬರವನ್ನಾಗಿ ಪರಿವರ್ತಿಸಲು ಅಗತ್ಯ ಸಲಹೆ ಮತ್ತು ಸಣ್ಣ ಗೊಬ್ಬರ ಪರಿವರ್ತಕ ಯಂತ್ರದ ಮಾದರಿಯನ್ನು ಪರಿಚಯಿಸಲಾಗುತ್ತದೆ.
ಗ್ರೀನ್ ಸಿಟಿ ಫೋರಂ ಮತ್ತು ಕೊಡಗು ಫಾರ್ ಟುಮಾರೊ ಸಂಘಟನೆ ನಗರಸಭೆಯ ಸ್ವಚ್ಛತಾ ಕಾರ್ಮಿಕರಿಗೆ ಸ್ವಚ್ಛತಾ ಕಾರ್ಯದ ಬಗ್ಗೆ ತಿಂಗಳಿಗೆ ಒಂದು ಬಾರಿ ಕಾರ್ಯಾಗಾರ ಮತ್ತು ಆರೋಗ್ಯ ಶಿಬಿರ ನಡೆಸಲಿದೆ. ನಗರದ ಸಾರ್ವಜನಿಕರು, ಸ್ವಯಂ ಸೇವಕರು ಹಾಗೂ ವಿದ್ಯಾರ್ಥಿಗಳನ್ನೊಳಗೊಂಡ ಸುಮಾರು 200 ಮಂದಿಯ ಹಸಿರು ಪಡೆ (ಉಖಇಇಓ ಈಔಖಅಇ) ಜನರಲ್ಲಿ ನಿರಂತರವಾಗಿ ಸ್ವಚ್ಛತೆ ಬಗ್ಗೆ ಜಾಗೃತಿಯನ್ನು ಮೂಡಿಸಲಿದೆ. ಈ ಅಭಿಯಾನವನ್ನು ಮೊದಲ ಹಂತದಲ್ಲಿ ನಗರದಲ್ಲಿ ಯಶಸ್ವಿಗೊಳಿಸಿ ನಂತರದ ದಿನಗಳಲ್ಲಿ ಜಿಲ್ಲಾ ವ್ಯಾಪಿಗೆ ವಿಸ್ತರಿಸಲಾಗುವದು.
ತ್ಯಾಜ್ಯಕ್ಕೆ ಸಂಬಂಧಿಸಿದಂತೆ ಗ್ರೀನ್ ಸಿಟಿ ಫೋರಂನ ಜಯಾ ಚಿಣ್ಣಪ್ಪ - 9686090000 ಹಾಗೂ ಸತ್ಯ - 9448721252 ಇವರುಗಳನ್ನು ಸಂಪರ್ಕಿಸಬಹುದು.
ಇತರÀ ವಿಷಯ : ನಗರಸಭೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಈ ಬಾರಿ ತೀರಾ ಏರಿಕೆಯಾಗಿದ್ದು, ಈ ಬಗ್ಗೆ ಗಮನಿಸುವಂತೆ ಪತ್ರಕರ್ತರು ಜಿಲ್ಲಾಧಿಕಾರಿಯವರ ಗಮನ ಸೆಳೆದರು.
ಪರಿಸ್ಥಿತಿ ನೋಡಿಕೊಂಡು ಖಾಸಗಿ ಬಸ್ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ತೀರ್ಮಾನಿಸಲಾಗುವದು, ಹಳೆ ಖಾಸಗಿ ಬಸ್ ನಿಲ್ದಾಣವನ್ನು ಪ್ರವಾಸಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ಇದೀಗ ಕಾಮಗಾರಿ ಆರಂಭಿಸಲಾಗಿದೆ, ನಗರದ ರಾಣಿಪೇಟೆ ರಸ್ತೆ ರಿಪೇರಿ, ಯುಜಿಡಿ ಸಮಸ್ಯೆಗೆ ಸದ್ಯದಲ್ಲಿ ಸಭೆ, ನಗರಸಭೆ ವತಿಯಿಂದ ಸದ್ಯದಲ್ಲಿಯೇ ನಾಗರಿಕರ ಸಭೆ ಕರೆಯಬೇಕೆಂಬ ಪತ್ರಕರ್ತರ ಸಲಹೆಗೆ ಜಿಲ್ಲಾಧಿಕಾರಿಗಳು ಸಮ್ಮತಿ ನೀಡಿದರು.
ನಗರಸಭೆ ಚುನಾವಣೆ ಬಗ್ಗೆ ತಮಗೆ ಯಾವದೇ ಮಾಹಿತಿ ಇಲ್ಲವೆಂದು ಹೇಳಿದರು. ಪೌರಾಯುಕ್ತ ರಮೇಶ್ ಪಾಲ್ಗೊಂಡಿದ್ದರು.