ಅಮ್ಮತ್ತಿ, ಜೂ. 3: 2019ನೇ ಸಾಲಿನ ಕೊಡಗು ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿಯಲ್ಲಿ 6-4 ಗೋಲುಗಳ ಅಂತರದಿಂದಲ್ಲಿ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲವೆನ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾಲಿ ಚಾಂಪಿಯನ್ ಸಹರಾ ಒಂಟಿಯಂಗಡಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಬೆಳಗ್ಗೆ ನಡೆದ ಫೈನಲ್ ಹಣಾಹಣಿಯ ಮೊದಲಾರ್ಧದಲ್ಲಿ ಎರಡೂ ತಂಡಗಳು ನೀರಸ ಆಟ ಪ್ರದರ್ಶಿಸಿದವು. ಈ ಅವಧಿಯಲ್ಲಿ ಯಾವದೇ ಗೋಲು ದಾಖಲಾಗಲಿಲ್ಲ. ಆದರೆ ದ್ವಿತೀಯ ಅವಧಿಯಲ್ಲಿ ಬಿರುಸಿನ ಆಟ ಪ್ರದರ್ಶಿಸಿದ ಸಹರಾ ತಂಡದ ಶರತ್ 27ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ 30ನೇ ನಿಮಿಷದಲ್ಲಿ ಪಾಲಿಬೆಟ್ಟ ತಂಡದ ಶರತ್ ಆಕರ್ಷಕ ಗೋಲು ದಾಖಲಿಸಿ ಪಂದ್ಯದಲ್ಲಿ ಸಮಬಲ ಸಾಧಿಸಿದರು. ಪಂದ್ಯಾವಳಿಯ ಕೊನೆಯ ಕ್ಷಣಗಳಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಕ್ಯಾಪ್ಟನ್ಸ್ ತಂಡದ ಕಿರಣ್, ವಿನು, ಅಜಿತ್, ಚಿಕ್ಕ ಮತ್ತು ಟಿಪಿ ಅಜಿತ್ ಗೋಲು ದಾಖಲಿಸಿದರೆ, ಸಹರಾ ತಂಡದ ಸೀನಾ, ಮೈಖೆಲ್ ಧನುಶ್ ಗೋಲು ದಾಖಲಿಸಿದರು. ಆದರೆ ಧೀರಜ್ ಗೋಲು ಗಳಿಸುವಲ್ಲಿ ವಿಫಲರಾದರು. ಕ್ಯಾಪ್ಟನ್ಸ್
(ಮೊದಲ ಪುಟದಿಂದ) ತಂಡದ ಪ್ರವೀಣ್ ಅತ್ಯುತ್ತಮ ಮುನ್ನಡೆ ಆಟಗಾರ, ಐಎನ್ಎಸ್ ಗುಡ್ಡೆಹೊಸೂರು ತಂಡದ ಪಾಂಡ್ಯನ್ ಅತ್ಯುತ್ತಮ ಮಿಡ್ ಫೀಲ್ಡರ್, ಕೊಡಗರಹಳ್ಳಿ ತಂಡದ ಕೇಶವ್ ಅತ್ಯುತ್ತಮ ಡಿಫೆಂಡರ್, ಮತ್ತು ಸಹರಾ ತಂಡದ ಧೀರಜ್ ಸರಣಿಯ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು. ಪಂದ್ಯಾವಳಿಯಲ್ಲಿ ಮುಖ್ಯ ತೀರ್ಪುಗಾರರಾಗಿ ಇಬ್ರಾಹಿಂ ಕಾರ್ಯನಿರ್ವಹಿಸಿದರೆ, ಉಸ್ಮಾನ್ ಮತ್ತು ರಿಚರ್ಡ್ ಸಹ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಇದಕ್ಕೂ ಮೊದಲು ಫೈನಲ್ ಪಂದ್ಯಾವಳಿಯನ್ನು ಅಮ್ಮತ್ತಿ ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಕೆಸಿ ಸುಬ್ಬಯ್ಯ ಬಾಲ್ ಒದೆಯುವ ಮೂಲಕ ಉದ್ಘಾಟಿಸಿದರು. ಸಮಾರೋಪ ಸಮಾರಂಭದಲ್ಲಿ ವೀರಾಜಪೇಟೆ ಕ್ಲಬ್ ಮಹೀಂದ್ರಾ ವ್ಯವಸ್ಥಾಪಕ ಜಿಶ್ನು ಉಣ್ಣಿ, ಐಎನ್ಎಸ್ ಗುಡ್ಡೆಹೊಸೂರು ಸಂಸ್ಥಾಪಕ ಐಚೆಟ್ಟಿರ ಸೋಮಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.