ನಾಪೋಕ್ಲು, ಜೂ. 4: ಸಮೀಪದ ಕಕ್ಕಬ್ಬೆ ಬಳಿಯ ಮರಂದೋಡ ಗ್ರಾಮದ ಕೇಕುಮಾನಿ ಶ್ರೀ ಭಗವತಿ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಎರಡು ವರ್ಷಗಳಿಗೊಮ್ಮೆ ನಡೆಯುವ ದೇವರ ಉತ್ಸವದ ಅಂಗವಾಗಿ ಮೇ. 16ರಿಂದಲೇ ಗ್ರಾಮದಲ್ಲಿ ದೇವರ ಕಟ್ಟುಬೀಳುವ ಮೂಲಕ ಉತ್ಸವಕ್ಕೆ ಚಾಲನೆ ದೊರೆತ್ತಿತ್ತು. ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಕಳಿಯಪಾತ್ರೆ ಉತ್ಸವ ಹಾಗೂ ಭಾನುವಾರ ಸಂಜೆ ಎತ್ತುಪೋರಾಟ ನಡೆಯಿತು. ಸೋಮವಾರ ಬೆಳಗ್ಗೆ ಶಾಸ್ತಾವು, ಅಜ್ಜಪ್ಪ ತೆರೆ ಹಾಗೂ ಅಯ್ಯಪ್ಪ ತೆರೆಗಳು ಜರುಗಿದ ಬಳಿಕ ಭದ್ರಕಾಳಿ ಮತ್ತು ಪಡಮಾಲಿ ವಿಶೇಷ ಮುಡಿತೆರೆ ಜರುಗಿ ವಿಶೇಷ ವಾದ್ಯಮೇಳದೊಂದಿಗೆ ದೇವಾಲಯ ಮತ್ತು ದೈವಗುಡಿಗಳಿಗೆ ಪ್ರದಕ್ಷಿಣೆ ಹಾಕಲಾಯಿತು. ಬಳಿಕ ಭಕ್ತಾಧಿಗಳು ಇಷ್ಟಾರ್ಥ ನೆರವೇರಿಕೆಯ ಹರಕೆ ಒಪ್ಪಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಕಳೆದ ಕೆಲವು ವರ್ಷಗಳಿಂದ ಮುಕ್ಕಾಟೀರ ಪ್ರಕಾಶ್ ಮತ್ತು ಸಹೋದರರು, ಭಕ್ತಾಧಿಗಳಿಗೆ ಅನ್ನದಾನ ನೆರವೇರಿಸಿ ಕೊಂಡು ಬರುತ್ತಿರುವದು ವಿಶೇಷ. ಈ ಸಂದರ್ಭ ದೇವತಕ್ಕರಾದ ಮಾರ್ಚಂಡ ರಮೇಶ್ ಅಯ್ಯಪ್ಪ ಮತ್ತು ಭಂಡಾರ ತಕ್ಕರಾದ ಮುಕ್ಕಾಟೀರ ರಮೇಶ್ ಹಾಗೂ ಚೆಂಡಿರ ಜಗದೀಶ್, ಮಾರ್ಚಂಡ ಗಣಪತಿ, ಅಣ್ಣಾಡಿಯಂಡ ದಿಲೀಪ್, ಮುಕ್ಕಾಟೀರ ಯಾದವ ಇವರುಗಳು ದೇವತಾಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಎರಡು ವರ್ಷಗಳಿಗೊಮ್ಮೆ ನಡೆಯುವ ದೇವತಾ ಕೈಂಕರ್ಯದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪುನೀತರಾದರು. - ದುಗ್ಗಳ