*ಸಿದ್ದಾಪುರ, ಜೂ. 3: ವಾಲ್ಲೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಮಂಗಲ ಬಳಿ ಇರುವ ಕೆರೆಗೆ ಕೋಳಿ ವ್ಯಾಪಾರಿಗಳು ಕೋಳಿ ಮಾಂಸದ ತ್ಯಾಜ್ಯಗಳನ್ನು ಸುರಿದು ಕಲುಶಿತಗೊಳಿಸಿರುವ ಹಿನ್ನೆಲೆಯಲ್ಲಿ ಕೆರೆಯನ್ನು ಸ್ವಚ್ಛಗೊಳಿಸಿ ಸುತ್ತಲೂ ಬೇಲಿ ಹಾಕಲು ಮತ್ತು ತ್ಯಾಜ್ಯ ಸುರಿಯುವವರ ಮೇಲೆ ದಂಡ ವಿಧಿಸಲು ಇಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ತ್ಯಾಜ್ಯ ಸುರಿಯುವದು ಕಂಡು ಬಂದಲ್ಲಿ ಅವರ ವಿರುದ್ಧ 30 ಸಾವಿರದಷ್ಟು ದಂಡ ವಿಧಿಸಲು ತೀರ್ಮಾನಿಸಲಾಯಿತು. ಅಲ್ಲದೆ ಅಂತಹವರ ವ್ಯಾಪಾರದ ಪರವಾನಗಿಯನ್ನು ರದ್ದುಗೊಳಿಸಲು ಒತ್ತಾಯಿಸುವಂತೆಯೂ ತೀರ್ಮಾನಕೈಗೊಳ್ಳಲಾಯಿತು.
ಜ್ಯೋತಿನಗರ ಪ್ರದೇಶವು ಐಯ್ಯಪ್ಪ ದೇವರಕಾಡು ಪ್ರದೇಶವಾಗಿದ್ದು ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಕೂಡದೆಂದು ಈ ಹಿಂದೆ ಬಸವನಬನ ದೇವರಕಾಡು ಸಂರಕ್ಷಣಾ ಸಮಿತಿ ಪ್ರಮುಖರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ತಡೆಯಾಜ್ಞೆಯಿರುವ ಪ್ರದೇಶದ ಸರ್ವೇ ನಂಬರ್ ತಾಳೆಯಾಗುತ್ತಿಲ್ಲ. ಬಸವನ ಬನ ಸಮಿತಿಯವರು ತಂದಿರುವ ತಡೆಯಾಜ್ಞೆಯು ಬಾಳೆಗುಂಡಿ ಪ್ರದೇಶದ ಸರ್ವೇನಂಬರ್ ಆಗಿದೆ. ಐಯ್ಯಪ್ಪ ದೇವರಕಾಡು ಪ್ರದೇಶ ಜನವಸತಿ ಪ್ರದೇಶವಾಗಿದ್ದು ತಡೆಯಾಜ್ಞೆಯಿರುವ ಕಾರಣ ಅಭಿವೃದ್ಧಿಯಿಂದ ಹಿಂದುಳಿದಿತ್ತು. ಇಲ್ಲಿನ ರಸ್ತೆಗಳು ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗುವುದಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಯಿತು.
ಗ್ರಾಮದಲ್ಲಿ ವನಮಹೋತ್ಸವ ಆಚರಣೆ ವೇಳೆ ಇತರೆ ಕಾಡು ಗಿಡಗಳನ್ನು ನೆಡುವ ಬದಲು ಹಣ್ಣಿನ ಗಿಡಗಳನ್ನು ನೆಟ್ಟು ಸಂರಕ್ಷಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸತೀಶ್, ಸದಸ್ಯ ಅಂಚೆಮನೆ ಸುಧಿಕುಮಾರ್, ಭುವನೇಂದ್ರ, ಹೆಚ್.ಎಂ.ಕಮಲಮ್ಮ, ಕವಿತ, ಯಶೋಧ ಗ್ರಾಮಾಭಿವೃದ್ಧಿ ಅಧಿಕಾರಿ ಅನಿಲ್ ಹಾಗೂ ಇತರರು ಉಪಸ್ಥಿತರಿದ್ದರು.