ಮಡಿಕೇರಿ, ಜೂ. 2: ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಯಾರನ್ನು ಕಡೆಗಣಿಸದಿರಿ. ದಿವ್ಯಾಂಗ ಮಕ್ಕಳನ್ನು ಮನೆಯಲ್ಲಿ ಕೂರಿಸದೇ ಕಾಲೇಜು ಶಿಕ್ಷಣದ ಅವಕಾಶ ಕಲ್ಪಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಚ್ಚಾಡೋ ಹೇಳಿದರು.

ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಇವರ ವತಿಯಿಂದ 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಮಡಿಕೇರಿ ತಾಲೂಕಿನ ವಿಶೇಷಚೇತನರಿಗೆ ಏರ್ಪಡಿಸಿದ ಅಭಿನಂದನಾ ಕಾರ್ಯಕ್ರಮವನ್ನು ನಗರದ ಬಿಆರ್‍ಸಿ ಕೇಂದ್ರದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದಿವ್ಯಾಂಗ ಮಕ್ಕಳಿಗೆ ಇಲಾಖೆ ವತಿಯಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿಕೊಡಲಾಗುವದು. ನಿಸರ್ಗ ಫೌಂಡೇಷನ್ ವತಿಯಿಂದಲೂ ಆರ್ಥಿಕ ಸಹಾಯ ನೀಡುವದಾಗಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಉಪ ಯೋಜನಾ ಸಮನ್ವ ಯಾಧಿಕಾರಿ ಬೆಟ್ಟನಾಯಕ್ ವಹಿಸಿದ್ದರು. ಸ.ಮಾ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಶಿವರಾಮು, ಜಿಲ್ಲಾ ದೈಹಿಕ ಶಿಕ್ಷಾಣಾಧಿಕಾರಿ ವೆಂಕಟೇಶ, ಬಿ.ಆರ್.ಸಿ ಕೇಂದ್ರದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಟ್ಟ ರಂಗನಾಥ್ ಹಾಗೂ ಜಿಲ್ಲಾ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಚ್.ಎಂ. ವೆಂಕಟೇಶ್ ಉಪಸ್ಥಿತರಿದ್ದರು.

2019ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ನಡೆದ 10 ನೇ ತರಗತಿ ಪರೀಕ್ಷೆಯಲ್ಲಿ ಪುಷ್ಪರಾಜ್ ಶೇ.83.36 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.

ದರ್ಶನ್ ಕೆ.ಯು ಅವರು ಶೇ.79.68 ಅಂಕ ಪಡೆದು ದ್ವಿತೀಯ ಸ್ಥಾನ, ವೀಣಾ ಎಂ.ಕೆ. ಅವರು ಶೇ.75.84 ಅಂಕ ಪಡೆದು ತೃತೀಯ ಸ್ಥಾನ ಹಾಗೂ ಧನ್ಯ ಎಂ.ಕೆ. ಅವರು ಶೇ. 74 ಅಂಕ ಪಡೆದು ನಾಲ್ಕನೇ ಸ್ಥಾನ ಪಡೆದವರನ್ನು ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮಗ್ರ ಶಿಕ್ಷಣ ಅಭಿಯಾನ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.