ಚೆಟ್ಟಳ್ಳಿ, ಜೂ. 2: ‘ಕೊಡಗು ಸೇವಾ ಕೇಂದ್ರ’ ಕಳೆದ ವರ್ಷ ಮಹಾಮಳೆಗೆ ತುತ್ತಾದ ಮಡಿಕೇರಿ ಆಸುಪಾಸಿನ ನಿವಾಸಿಗಳಿಗೆ ಚಿರಪರಿಚಿತ ಎಂದೇ ಹೇಳಬಹುದು. ಕೊಡಗು ಏಕೀಕರಣ ರಂಗ, ವೇಕ್ ಸಂಸ್ಥೆ, ಕೊಡಗು ವಿದ್ಯಾನಿಧಿ, ಸಂಯುಕ್ತ ಆಶ್ರಯದಲ್ಲಿ ಪ್ರಾರಂಭವಾದ ಕೇಂದ್ರವು ಇಂದು ಹಲವಾರು ಬಡ ಕುಟುಂಬಗಳ ಕಷ್ಟವನ್ನು ಪರಿಹರಿಸುವ ಕೇಂದ್ರವಾಗಿ ಬೆಳೆದಿದೆ. ಜನರಲ್ಲಿ ಭರವಸೆಯ ಬೆಳಕನ್ನು ಚೆಲ್ಲುತ್ತಿದೆ. ಮಡಿಕೇರಿಯ ಕೊಡವ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿರುವ ಈ ಸೇವಾ ಕೇಂದ್ರದಿಂದ ಕೊಡಗಿಗೆ ಸುರಿದ ಮಳೆಯಿಂದ ಜನತೆಗೆ ಆದ ಕಷ್ಟ, ನಷ್ಟವನ್ನು ಅವರವರ ಗ್ರಾಮ, ಮನೆಗೆ ತೆರಳಿ ಖುದ್ದಾಗಿ ಪರಿಶೀಲಿಸಿ ದಾಖಲೆಯನ್ನು ಗಣಕಯಂತ್ರದಲ್ಲಿ ಶೇಖರಿಸಿ ಸರಕಾರಕ್ಕೆ ಒಪ್ಪಿಸುವ ಕೆಲಸವನ್ನು ಮೊದಲ ಹಂತವಾಗಿ ಪ್ರಾರಂಭಿಸಲಾಯಿತು .

ಮೊದಲಿಗೆ ಕೊಡಗು ಎಜುಕೇಶನ್ ಫಂಡ್‍ನ ಅಧ್ಯಕ್ಷ ಅರ್ಜುನ್ ಮುತ್ತಣ್ಣ, ಕಾರ್ಯದರ್ಶಿ ಮಾರ್ಚಂಡ ಗಣೇಶ್, ಸದಸ್ಯರಾದ ಪಂದಿಯಂಡ ಸೂರಜ್, ಸಂತ್ರಸ್ತರ ಮಕ್ಕಳಿಗೆ ಶಾಲಾ ಶುಲ್ಕವನ್ನು ಒದಗಿಸಿದರೆ, ಮತ್ತೆ ಹಲವಾರು ದಾನಿಗಳಿಂದ ಕೇಂದ್ರದ ಮುಖಂತರ ಲಕ್ಷಾಂತರ ರೂಪಾಯಿಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು.

ಸರಕಾರವು ಗಾಳಿಬೀಡು, ಕಾಲೂರು, ಮುಕ್ಕೋಡ್ಲು, ಮೊಣ್ಣಂಗೇರಿ, ಜೋಡುಪಾಲ ಹಾಗೂ ಇನ್ನಿತರ ಗ್ರಾಮಗಳ ಜನರ ಕಷ್ಟಕ್ಕೆ ಸ್ಪಂದಿಸಿದರೆ, ‘ಕೊಡಗು ಸೇವಾ ಕೇಂದ್ರವು’ ಕುಗ್ರಾಮಗಳಾದ ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಹಚ್ಚಿನಾಡು, ಕಿಕ್ಕರಳ್ಳಿ ಕುಂಬಾರಗಡಿಗೆ, ಮಂಕ್ಯ ಮುಂತಾದ ಗ್ರಾಮದ ಜನರು ಗ್ರಾಮಗಳನ್ನು ತೊರೆಯಬೇಕಾಗಿದ್ದ ಪರಿಸ್ಥಿತಿ ಬಂದಾಗ, ಅವರಿಗೆ ಬೆನ್ನೆಲುಬಾಗಿ ನಿಂತಿತ್ತು. ಕೊಡಗು ಸೇವಾ ಕೇಂದ್ರವು ಇನ್ಫೋಸಿಸ್ ಫೌಂಡೇಶನ್‍ನ ಸುಧಾಮೂರ್ತಿ ಅವರನ್ನು ಸಂಪರ್ಕಿಸಿ ಗ್ರಾಮಗಳ ಸ್ಥಿತಿಯ ನೈಜ ವರದಿಯನ್ನು ಮನದಟ್ಟಾಗುವಂತೆ ವಿವರಿಸಿ, ಮುಂದೆ ಅವರಿಗೆ ಬದುಕಲು ವರಮಾನ ಮಾಡಿಕೊಡಲು ರೂಪಿಸಿದ ಕೆಲವು ಯೋಜನೆಗಳನ್ನು ತೋರಿಸಲಾಯಿತು. ಅದರಂತೆ ಅವರು ಮುನ್ನೂರು ದÀನದ ಕೊಟ್ಟಿಗೆ ಮತ್ತು ಮೂನ್ನೂರು ಕೋಳಿಗೂಡಿನ ಯೋಜನೆಯನ್ನು ಅಂಗೀಕರಿಸಿ; ಸೇವಾಕೇಂದ್ರದ ಮುಖಾಂತರ ನಿರ್ಮಿಸುವಂತೆ ಸಲಹೆಯಿತ್ತರು.

ಸಂತ್ರಸ್ತ ಮಹಿಳೆಯರ ಸ್ವಾವಲಂಬನೆಗಾಗಿ ಇನ್ಫೋಸಿಸ್ ಫೌಂಡೇಶನ್ 200 ಹೊಲಿಗೆ ಯಂತ್ರಗಳನ್ನು ಈಗಾಗಲೇ ವಿತರಿಸಿದೆ. ತರಕಾರಿ ಬೆಳೆಯಲು ಪ್ರತಿ ಆರು ಕುಟುಂಬಗಳಿಗೆ 15 ರಿಂದ 20 ಲಕ್ಷದಷ್ಟು ವೆಚ್ಚದಲ್ಲಿ ಅರ್ಧ ಎಕರೆ ವಿಸ್ತೀರ್ಣದ ಪಾಲಿ ಹೌಸ್ ನಿರ್ಮಿಸಿಕೊಡುವಂತೆ ಭರವಸೆಕೊಟ್ಟರು. ನಂತರ ರೈತರೇ ಸಂಘ ಕಟ್ಟಿಕೊಂಡು ತರಕಾರಿ ಬೆಳೆಯಬಹುದು. ಪ್ರಥಮ ಹಂತದಲ್ಲಿ ಕಾಲೂರು, ಮುಟ್ಲು, ಹಮ್ಮಿಯಾಲದಲ್ಲಿ ಇವನ್ನು ನಿರ್ಮಿಸಲಾಗುತ್ತಿದೆ. ಸುಧಾಮೂರ್ತಿ ಅವರೇ ಖುದ್ದಾಗಿ ಕಾಲೂರು ಹಾಗೂ ಇನ್ನಿತರ ಪ್ರಕೃತಿ ವಿಕೋಪ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಅಲ್ಲದೆ ಮನೆ ಕಳೆದು ಕೊಂಡ ಸಂತ್ರಸ್ತರಿಗೆ ತಮ್ಮ ಜಾಗದಲ್ಲೆ ಸ್ವಂತ ಮನೆ ನಿರ್ಮಿಸಿಕೊಳ್ಳಲು ಸೇವಾಕೇಂದ್ರಕ್ಕೆ ಬಂದ ಅರ್ಜಿಗಳನ್ನು ಪರಿಶೀಲಿಸಿ 200 ಮನೆಗಳನ್ನು ಕಟ್ಟಿಕೊಡುವ ಭರವಸೆ ಕೊಟ್ಟಿದ್ದಾರೆ.

ಇನ್ನು ಇನ್ನರ್ ವೀಲ್ ಕ್ಲಬ್ ಸಂಸ್ಥೆಯ ಜೊತೆ ಕೈ ಜೋಡಿಸಿದ್ದು , ಹಲವಾರು ಸಂತ್ರಸ್ತ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ಹೊಲಿಗೆ ತರಬೇತಿ ನೀಡುವ ಮುಖಾಂತರ ವಿತರಿಸಲಾಗಿದೆ.

ಕೊಡಗಿನ, ಸೂರ್ಲಬ್ಬಿ, ಹಮ್ಮಿಯಾಲ, ದೇವಸ್ತೂರು, ಕುಂಬಾರಗಡಿಗೆಯಂತಹ ಹಳ್ಳಿಗರು ಈಗಲೂ ಸೀಮೆಎಣ್ಣೆದೀಪ ಹಾಗೂ ಕಟ್ಟಿಗೆಯ ಬೆಳಕನ್ನು ಅವಲಂಬಿಸಿ ಬದುಕುತ್ತಿರುವದು ನಿಜಕ್ಕೂ ಬೇಸರದ ವಿಷಯ.

ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಹಮ್ಮಿಯಾಲದಲ್ಲಿ ಜಲ ವಿದ್ಯುತ್ ಕಲ್ಪಿಸಲು ಪ್ರಯತ್ನ ನಡೆದಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಮಡಿಕೇರಿಯ ಆರ್ಥಿಕ ನೆರವು ಹಾಗೂ ಸಹಕಾರದಿಂದ ಸಾಧ್ಯವಾಗಿದೆ. ಇನ್ನರ್ ವೀಲ್ ಸಂಸ್ಥೆಯ ಸ್ಮಿತಾ ಪಿಂಗ್ಲೆ, ಡಾ. ಸಾರಿಕಾ ಪ್ರಸಾದ್, ಲತಾ ಚಂಗಪ್ಪ್ಪ, ಕಣ್ಣುದೇವರಾಜ್ ಹಾಗೂ ಯೋಜನಾ ನಿರ್ದೇಶಕಿ ನಯನಾ ಅಚ್ಚಪ್ಪ ಹಾಗೂ ಇತರೆ ಪದಾಧಿಕಾರಿಗಳು ಹಮ್ಮಿಯಾಲಕ್ಕೆ ಖುದ್ದು ಭೇಟಿ ನೀಡಿ ಈ ಭಾಗದ ಹನ್ನೊಂದು ಕುಟುಂಬ ಕತ್ತಲೆಯಲ್ಲಿ ಬದುಕು ಸಾಗಿಸುತ್ತಿರುವದನ್ನು ಮನಗೊಂಡು ಬೆಳಕು ಹರಿಸುವದರ ಮೂಲಕ ಹೊಸ ಜೀವನ ನೀಡಿದ್ದಾರೆ.

ಮಾಂದಲ್ಪಟ್ಟಿ (ಮುಗಿಲುಪೇಟೆ)ಯ ಬೆಟ್ಟಗಳ ತಪ್ಪಲಿನ ದಟ್ಟ ಕಾನನದ ನಡುವೆ ರಸ್ತೆಯಲ್ಲಿ ಸಾಗಿದಾಗ ಪುಷ್ಪಗಿರಿ ಅಭಯಾರಣ್ಯದ ಸಮೀಪ ಸಿಗುವದೇ ಈ ಪುಟ್ಟ ಊರಿನ ಮೊಣ್ಣಂಡ, ಚೋಳಚಂಡ, ತಂಬುಕುತ್ತಿರ ಕುಟುಂಬದ ಮನೆಗಳು.ಮಳೆಗಾಲದಲ್ಲಿ ಮಂಜು ಕವಿದ ವಾತಾವರಣ, ಧಾರಾಕಾರವಾಗಿ ಸುರಿಯುವ ಜಡಿ ಮಳೆ, ಜಿಗಣೆಗಳ ಕಾಟದೊಂದಿಗೆ ಮನೆಕಟ್ಟಿಕೊಂಡು ಏಲಕ್ಕಿ, ಭತ್ತ ಹಾಗೂ ತರಕಾರಿಗಳನ್ನು ಸ್ವತಃ ಬೆಳೆದು ಜೀವನ ಸಾಗಿಸುವ ಶ್ರಮಜೀವಿಗಳಿವರು.

ಮೊಬೈಲ್ ಸಂಪರ್ಕ, ದೂರದರ್ಶನ, ದಿನಪತ್ರಿಕೆ ಇವರಿಗೆ ಕನಸಿನ ಮಾತು. ಹತ್ತಿರದ ಪಟ್ಟಣವೆಂದರೆ 25 ಕಿ.ಮೀ. ದೂರದ ಮಾದಪುರ. ಬಹುತೇಕ ಗಂಡು ಮಕ್ಕಳು ಉದ್ಯೋಗ ಅರಸಿ ದೂರದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಳೆಗಾಲದ ಆರು ತಿಂಗಳು ಇವರಿಗೆ ಅಜ್ಞಾತ ವಾಸ. ಇಲ್ಲಿರುವ ಪ್ರಾಥಮಿಕ ಶಾಲೆಯನ್ನು ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಮುಚ್ಚಲಾಗಿದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ 4 ಕಿ.ಮೀ. ದೂರದ ಸೂರ್ಲಬ್ಬಿಗೆ ತೆರಳಬೇಕು. ಕಾಲೇಜು ಶಿಕ್ಷಣಕ್ಕೆ ದೂರದ ಮಡಿಕೇರಿಯೇ ಗತಿ.

ಇಲ್ಲಿ ಬದುಕು ಕಟ್ಟಿಕೊಂಡಿರುವ ಜನರ ಶ್ರಮವನ್ನು ಮೆಚ್ಚಲೇಬೇಕು. ಕಳೆದ ಎಪ್ಪತ್ತು ದಶಕಗಳಿಂದಲೂ ವಿದ್ಯುತ್ ಬೆಳಕಿಗಾಗಿ ಜಾತಕ ಪಕ್ಷಿಯಂತೆ ಕಾದ ಈ ಊರಿನ ಜನತೆಗೆ ಇನ್ನರ್ ವೀಲ್ ಕ್ಲಬ್ ಈಗ ಬೆಳಕು ತೋರಿಸಿದೆ. ಕೇರಳದ ಕಣ್ಣನೂರಿನ ‘ಇ&amdiv;ಇ’ ಸಿಸ್ಟಮಿನ ವಿನೋದ್ ಎಂಬವರು ಒಂದು ಮನೆಗೆ ಇಪ್ಪತ್ತೈದು ಸಾವಿರ ವೆಚ್ಚದಲ್ಲಿ ಇಲ್ಲಿನ ನಿವಾಸಿಗಳ ಮನೆ ಸಮೀಪದಲ್ಲಿ ಹರಿಯುವ ತೋಡುಗಳಿಂದ ಕಪ್ಪು ಪೈಪಿನಲ್ಲಿ ಟ್ಯಾಂಕ್‍ಗೆ ನೀರು ಹರಿಸಿ ಎಂಬತ್ತು ವ್ಯಾಟ್ ಸಾಮಾಥ್ರ್ಯದ ಪುಟ್ಟ ಟರ್ಬೈನ್ ಯಂತ್ರ ರಭಸದಿಂದ ತಿರುಗುವಂತೆ ಮಾಡಿದ್ದಾರೆ. ನೀರಿನ ಲಭ್ಯತೆಗನುಗುಣವಾಗಿ ಮೂರರಿಂದ ಹತ್ತು ಬಲ್ಬುಗಳು ಉರಿಯುವಂತೆ ಮಾಡಿದ್ದಾರೆ. ಇದರ ಸಂಪೂರ್ಣ ವೆಚ್ಚವನ್ನು ಇನ್ನರ್ ವೀಲ್ ಕ್ಲಬ್ ಭರಿಸಿದೆ. ನೈಸರ್ಗಿಕ ಜಲಮೂಲಗಳನ್ನು ಬಳಸಿಕೊಂಡು ನೀರು ಪೋಲಾಗುವದನ್ನು ತಪ್ಪಿಸಿ ವರ್ಷ ಪೂರ್ತಿ ವಿದ್ಯುತ್ ಪಡೆಯಬಹುದು. ವಿದ್ಯುತ್ ಬಿಲ್ ಪಾವತಿಸುವ ಚಿಂತೆಯಿಲ್ಲ, ವಿದ್ಯುತ್ ಕೈ ಕೊಡುವ ಆತಂಕವಿಲ್ಲ. ಜೊತೆಗೆ ಸರ್ವಋತುವಿನಲ್ಲಿ ತಮ್ಮ ಕೃಷಿ ಕಾರ್ಯಕ್ಕೆ ಬಳಸಿಕೊಳ್ಳಬಹುದು.ಈ ಊರಿನ ಜನತೆ ಸರಕಾರದ ನೆರವಿಲ್ಲದೆ ಸ್ವಯಂ ಸೇವಾ ಸಂಸ್ಥೆ ನೆರವಿನಿಂದ ಕಾರ್ಯ ಸಾಧನೆ ಮಾಡಿದಂತಾಗಿದೆ.

ಕೊಡಗು ಸೇವಾ ಕೇಂದ್ರದ ಮುಖ್ಯಸ್ಥ ಅಜ್ಜಿನಂಡ ತಮ್ಮು ಪೂವಯ್ಯ, ಸಂಚಾಲಕ ಬಿದ್ದಾಟಂಡ ತಮ್ಮಯ್ಯ, ತೇಲಪಂಡ ಪ್ರಮೋದ್, ಮಂದಪಂಡಾ ಸತೀಶ್, ಮುಂತಾದವರು ಇದ್ದರೇ, ಸೇವಾಕೇಂದ್ರದ ಸಹಯೋಗದಲ್ಲಿ ಪಂದಿಯಂಡ ಸೂರಜ್ ಮುತ್ತಣ್ಣ, ಪಾಂಡಿರ ಮುತ್ತಣ್ಣ, ಕೋದಂಡ ಸಂಪನ್ ಸೋಮಣ್ಣ, ಲಯನ್ಸ್ ಕ್ಲಬ್ ಗೋಣಿಕೊಪ್ಪ, ವರ್ತಕ ದಿನೇಶ್, ಮಾಪಂಗಡ ಸಜನ್, ಬಲ್ಲಚಂಡ ರಂಜನ್, ಮುಂತಾದ ಅನೇಕರು ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.