*ಸಿದ್ದಾಪುರ, ಜೂ. 2: ತ್ಯಾಗತ್ತೂರು ಗ್ರಾಮದ ವ್ಯಾಪ್ತಿಯಲ್ಲಿ ಒಂಟಿಸಲಗವೊಂದು ನಿರಂತರ ದಾಂಧಲೆ ನಡೆಸುತ್ತ ತೊಂದರೆ ಕೊಡುತ್ತಿದ್ದು ಈಗಾಗಲೇ ಆನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆ ತ್ಯಾಗತ್ತೂರಿನಲ್ಲಿರುವ ಕಾಡಾನೆಯನ್ನು ಹಿಡಿಯಬೇಕೆಂದು ಬೆಳೆಗಾರ ಮನುಮಹೇಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಿವಕುಮಾರ್ ಮತ್ತು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇಲ್ಲಿನ ತೆಂಗಿನ ತೋಟ, ಬಾಳೆ ತೋಟಗಳು ಒಂಟಿಸಲಗದ ದಾಂಧಲೆಯಿಂದ ನೆಲಸಮವಾಗಿದೆ. ಕಾಫಿ ತೋಟಗಳು ನಾಶವಾಗಿದೆ. ಕೆಲ ತೆಂಗಿನ ಮರಗಳನ್ನು ಒಂಟಿಸಲಗ ಧರೆಗೆ ಉರುಳಿಸಿದೆ. ಮುಂಜಾನೆ ವೇಳೆಯಲ್ಲಿ ಗ್ರಾಮದ ಕೆಲ ಮನೆಗಳ ಆವರಣಕ್ಕೆ ಬಂದು ದಾಂಧಲೆ ನಡೆಸಿ ಭೀತಿಯನ್ನು ಸೃಷ್ಠಿಸುತ್ತಿದೆ ಎಂದು ಗ್ರಾಮಸ್ಥರು ಗಮನ ಸೆಳೆದಿದ್ದಾರೆ.