ಗೋಣಿಕೊಪ್ಪ ವರದಿ, ಜೂ. 2: ಸರ್ಕಾರದ ನಿಯಮದಂತೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ದಿಢೀರ್ ಎಂದು ವಸತಿ ನಿಲಯದಿಂದ ಕೈಬಿಟ್ಟಿರುವ ವಿಚಾರವನ್ನು ಖಂಡಿಸಿದ ಪೋಷಕರು ಹಾಗೂ ಕ್ರೀಡಾ ಪ್ರೇಮಿಗಳು ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಪೊನ್ನಂಪೇಟೆ ವಸತಿ ನಿಲಯ ಆವರಣದಲ್ಲಿ ನಡೆಯಿತು.
ಕೈಬಿಟ್ಟಿರುವ 8 ವಿದ್ಯಾರ್ಥಿಗಳನ್ನು ಮತ್ತೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಕ್ರೀಡಾ ಹಾಗೂ ಶೈಕ್ಷಣಿಕ ಪ್ರಗತಿಗೆ ಸ್ಪಂದಿಸ ಬೇಕು ಎಂದು ಒತ್ತಾಯಿಸಲಾಯಿತು.
ಪೊನ್ನಂಪೇಟೆ ಕ್ರೀಡಾ ವಸತಿ ನಿಲಯದಿಂದ ಕೈಬಿಟ್ಟಿರುವ ವಿದ್ಯಾರ್ಥಿಗಳನ್ನು ಮತ್ತೆ ಸೇರ್ಪಡೆ ಮಾಡಬೇಕು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀಬಾಯ್ ಅವರನ್ನು ಪೋಷಕರು ಒತ್ತಾಯಿಸಿದರು.
ತಾ. ಪಂ. ಮಾಜಿ ಸದಸ್ಯ ಕೋಳೆರ ದಯಾ ಚಂಗಪ್ಪ ಮಾತನಾಡಿ, ವಸತಿ ನಿಲಯ ಮತ್ತು ಆವರಣದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ತರಬೇತುದಾರರ ನಡುವಿನ ಭಿನ್ನಾಬಿಪ್ರಾಯದಿಂದ ವಸತಿ ನಿಲಯದಿಂದ ವಿದ್ಯಾರ್ಥಿಗಳನ್ನು ಹೊರಗಿಡುವ ಹಂತಕ್ಕೆ ತಲುಪುವಂತಾಗಿದೆ ಎಂದು ಆರೋಪಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕಾರ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಪ್ರಗತಿಯನ್ನು ಆಧರಿಸಿ ಮುಂದುವರಿಸಲಾಗುತ್ತಿದೆ. ಪ್ರತೀ ವರ್ಷ ಅವರ ಪ್ರಗತಿಗೆ ಅನುಗುಣವಾಗಿ ವಸತಿ ನಿಲಯದಲ್ಲಿ ಮುಂದುವರಿಸಲಾಗುತ್ತಿದೆ. ವಿದ್ಯಾರ್ಥಿಗಳ ದೈಹಿಕ ಸಾಮಾಥ್ರ್ಯ ಹಾಗೂ ಕ್ರೀಡಾ ಪ್ರಗತಿ ಪರೀಕ್ಷೆ ನಡೆಸಿ ಅವರನ್ನು ನಿಲಯಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವದು ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಲಕ್ಷ್ಮೀಬಾಯ್ ಮಾತನಾಡಿ, ಪೋಷಕರ ಒತ್ತಾಯದಂತೆ ಜಿಲ್ಲಾಧಿಕಾರಿ ಅವರು ವಿದ್ಯಾರ್ಥಿಗಳ ದೈಹಿಕ ಹಾಗೂ ಕ್ರೀಡಾ ಪ್ರಗತಿ ಬಗ್ಗೆ ಪರೀಕ್ಷೆ ನಡೆಸುವಂತೆ ಸೂಚಿಸಿದ್ದಾರೆ. ಅದರಂತೆ ಪರೀಕ್ಷೆ ನಡೆಸಲಾಗುತ್ತಿದೆ. ನಂತರ ಜಿಲ್ಲಾಧಿಕಾರಿಗೆ ವರದಿ ನೀಡಲಾಗುವದು. ಜಿಲ್ಲಾಧಿಕಾರಿ ನೀಡುವ ವರದಿ ಬರುವವರೆಗೆ ಕಾಯಬೇಕು ಎಂದು ಪೋಷಕರಿಗೆ ತಿಳಿಸಿದರು. ಈ ಸಂದರ್ಭ ಜಿ. ಪಂ. ಸದಸ್ಯೆ ಶ್ರೀಜಾ ಸಾಜಿ, ಸ್ಥಳೀಯರುಗಳಾದ ಶ್ರೀಧರ್ ನೆಲ್ಲಿತ್ತಾಯ ಇತರರು ಇದ್ದರು.
ಜಿಲ್ಲಾಧಿಕಾರಿ ಆದೇಶದಂತೆ ಕೈಬಿಟ್ಟಿರುವ ವಿದ್ಯಾರ್ಥಿಗಳಾದ ಸಿ. ಎಂ. ನಾಚಪ್ಪ, ಪ್ರಸಿದ್, ದೇವ್ ಪೊನ್ನಣ್ಣ, ಸಂಗಮ್ ದೇವಯ್ಯ, ಎನ್.ಬಿ. ದೇವಯ್ಯ ಅವರುಗಳ ಪರೀಕ್ಷೆ ನಡೆಸಲಾಯಿತು. ಉಳಿದ ಮೂವರು ವಿದ್ಯಾರ್ಥಿಗಳು ಗೈರಾಗಿದ್ದರು.
-ಸುದ್ದಿಪುತ್ರ.